ಸೌಲಭ್ಯ ವಿತರಣೆಗೂ ಸಾಕ್ಷಿಯಾದ ಜನಸ್ಪಂದನ:16 ಜನರಿಗೆ ತ್ರಿಚಕ್ರ ವಿತರಣೆ
ಕಲಬುರಗಿ:ಮಾ.7:ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜನಸ್ಪಂದನ ಸಭೆಯು ವಿವಿಧ ಸರ್ಕಾರಿ ಸೌಲಭ್ಯ ವಿತರಣೆಗೂ ಸಾಕ್ಷಿಯಾಯಿತು.
ಮಹಾನಗರ ಪಾಲಿಕೆಯಿಂದ 2022-23ನೇ ಸಾಲಿನ ಎಸ್.ಎಫ್.ಸಿ. ಶೇ.5ರ ನಿಧಿಯಡಿ 16.30 ಲಕ್ಷ ರೂ. ವೆಚ್ಚದಲ್ಲಿ 16 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರು ವಿತರಣೆ ಮಾಡಿದರು.
ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ರೇಣುಕಾ ಯಲ್ಲಮ್ಮ ಟ್ರಸ್ಟ್(ರಿ) ಸಂಘಕ್ಕೆ ಘಟಕ ವೆಚ್ಚ 51 ಲಕ್ಷ ರೂ. ಪೈಕಿ 35.70 ಲಕ್ಷ ರೂ. ಸಹಾಯಧನದಡಿ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ನೀಡಲಾಯಿತು. ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಧೀರ ಸಂಗೋಳಿಕರ್, ನಿಗಮದ ರಾಜ್ಯ ಸಮಿತಿ ಸದಸ್ಯೆ ನರ್ಮದಾ ಈ ಸಂದರ್ಭದಲ್ಲಿ ಇದ್ದರು.
ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಈರುಳ್ಳಿ ಶೇಖರಣೆ ಘಟಕ ನಿರ್ಮಾಣಕ್ಕಾಗಿ ಕಲಬುರಗಿ ತಾಲೂಕಿನ ಸಾವಳಗಿ ಗ್ರಾಮದ ಮಹಾನಂದ ತಂದೆ ಶ್ರೀಮಂತ ಮತ್ತು ಅಜೀಜ್ ಪಟೇಲ್ ತಂದೆ ರುಕುಮ್ ಪಟೇಲ ಇವರಿಗೆ ತಲಾ 87,500 ರೂ., ಸಮುದಾಯ ಕೆರೆ ಘಟಕ ನಿರ್ಮಾಣಕ್ಕೆ ಪಟ್ಟಣ ಗ್ರಾಮದ ರತ್ನಾಬಾಯಿ ಬಸವರಾಜ ಅವರಿಗೆ 4 ಲಕ್ಷ ರೂ. ಸಹಾಯಧನ ಮಂಜೂರಾತಿ ಪತ್ರವನ್ನು ಶಾಸಕ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ ಹಾಗೂ ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಅವರು ವಿತರಿಸಿದರು. ಇದೇ ರೀತಿ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡಿದ್ದಕ್ಕಾಗಿ ಹಡಗಿಲಹಾರುತಿ ಗ್ರಾಮದ ಹಣಮಂತ ತಂದೆ ಶಿವು ಇವರಿಗೆ 1,16,993 ರೂ. ಮತ್ತು ಭಾರತಿ ಅರವಿಂದ ಅವರಿಗೆ 60,371 ರೂ. ಗಳ ಸಹಾಯಧನ ಮಂಜೂರಾತಿ ಪತ್ರ ಸಹ ವಿತರಿಸಲಾಯಿತು.
ಹಕ್ಕು ಪತ್ರ ವಿತರಣೆ: ಸ್ಲಮ್ ಬೋಡ್ ವತಿಯಿಂದ ಕಲಬುರಗಿ ನಗರದ ಬಾಬು ಜಗಜೀವನರಾಂ ಕಾಲೋನಿಯ 5 ಜನ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರಗಳನ್ನು ಕರ್ನಾಟಕ ರೇμÉ್ಮ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ ಮತ್ತು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ವಿತರಣೆ ಮಾಡಿದರು. ಸ್ಲಂ ಬೋರ್ಡ್ ಇ.ಇ. ಖಯೂಮ್, ಪಾಲಿಕೆ ಸದಸ್ಯೆ ರಾಘಮ್ಮ ಇನಾಂದಾರ, ಎ.ಇ.ಇ. ಶ್ರೀಧರ, ಎಸ್.ಓ. ಚೇತನ ಇದ್ದರು.