ಜನಸ್ಪಂದನ ಕಾರ್ಯಕ್ರಮಕ್ಕೆ ಜನಸಾಗರಅಹವಾಲು ಆಲಿಸಿದ ಉಸ್ತುವಾರಿ ಸಚಿವ ಪ್ರಿಯಾಂಕ್
ಕಲಬುರಗಿ,ಮಾ.7: ಬಹುನಿರೀಕ್ಷಿತ ಜನಸ್ಪಂದನ ಕಾರ್ಯಕ್ರಮಕ್ಕೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜನರಿಂದ ಅಹವಾಲುಗಳನ್ನು ಸ್ವೀಕರಿಸುವುದಕ್ಕೂ ಮುನ್ನ ಅವರು ಕಂದಾಯ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವರಾಜು ಅರಸು ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳು ತೆರೆದಿರುವ ಕೌಂಟರ್ ಗಳನ್ನು ವೀಕ್ಷಿಸಿದರು.
ಈ ಕೌಂಟರ್ ಗಳಲ್ಲಿ ಜನರು ಸಲ್ಲಿಸಿದ ಅಹವಾಲು ಅರ್ಜಿಗಳಿಗೆ ಕ್ರಮಾಂಕ ಸಂಖ್ಯೆ ನೀಡಿ ಸಚಿವರ ಎದುರಿಡುವ ವ್ಯವಸ್ಥೆ ಮಾಡಲಾಗಿತ್ತು.ಕೌಂಟರ್ ಗಳ ವೀಕ್ಷಣೆ ಬಳಿಕ ನೇರವಾಗಿ ವೇದಿಕೆಗೆ ತೆರಳಿದ ಸಚಿವರು ಜನರಿಂದ ಬಂದಿರುವ ಅಹವಾಲುಗಳನ್ನು ಆಲಿಸಿದರು. ಈ ನಿಟ್ಟಿನಲ್ಲಿ ಬಂದಿರುವ ಲಿಖಿತ ದೂರುಗಳ ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳೊಂದಿಗೆ ಚರ್ಚಿಸಿದ್ದಲ್ಲದೆ, ಸ್ಥಳದಲ್ಲೇ ಉಪಸ್ಥಿತರಿದ್ದ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಅಹವಾಲು ಪತ್ರಗಳನ್ನು ಹಸ್ತಾಂತರಿಸಿ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್,ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತಿ ಸಿಇಒ ಭವರ್ ಸಿಂಗ್ ಮೀನಾ, ಪಾಲಿಕೆ ಕಮಿಷನರ್ ಭುವನೇಶ್ ದೇವಿದಾಸ್ ಪಾಟೀಲ್, ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.