ತೆರಿಗೆ ಹಿಂದಿರುಗಿಸದ ಕೇಂದ್ರ ಸರಕಾರ: ಸಚಿವ ದಿನೇಶ್ ಬೇಸರ
ಕಲಬುರಗಿ,ಮಾ.7: ರಾಜ್ಯದಿಂದ ಬಹುಪಾಲು ತೆರಿಗೆ ಪಡೆಯುವ ಕೇಂದ್ರ ಸರಕಾರ ರಾಜ್ಯದ ಪಾಲಿನ ತೆರಿಗೆ ನೀಡದಿರುವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು.
ನಗರದ ನವೀಕೃತ ಶರಬಸವೇಶ್ವರ ಕೆರೆಯ ಸಾರ್ವಜನಿಕ ಉದ್ಯಾನವನ ಉದ್ಘಾಟನೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿನ ತೆರಿಗೆ ಹಣ ನೀಡದೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದರು.ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಬರಗಾಲ ಪರಿಹಾರ ಹಣ ಸಹ ಬಿಡುಗಡೆ ಮಾಡುತ್ತಿಲ್ಲ. ನರೇಗಾ ಮಾನವ ದಿನಗಳನ್ನು ಹೆಚ್ಚಿಸುತ್ತಿಲ್ಲ. ಹಲವಾರು ಬಾರಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಇದ್ದರು.