ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆಸುಳ್ಳು ಬಿಜೆಪಿಯವರ ಮನೆದೇವರು : ಸಿಎಂ ಸಿದ್ದರಾಮಯ್ಯ
ಅಥಣಿ :ಮಾ.7: ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುವ ಮೂಲಕ ನುಡಿದಂತೆ ನಡೆದು ಕೊಂಡಿದ್ದೇವೆ. 16 ಸಾವಿರ ಕೋಟಿ ಅನುದಾನ ಮೀಸಲಿಡುವ ಮೂಲಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆಯ 1486.81 ಕೋಟಿ ರೂಪಾಯಿ ಅನುದಾನದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಕೃಷ್ಣಾ ನದಿಯಿಂದ 3 ಟಿಎಂಸಿ ನೀರನ್ನು ಎತ್ತುವ ಮೂಲಕ ಈ ಭಾಗದ ಸು. 50 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. 12 ಹಳ್ಳಿಗಳ ರೈತರಿಗೆ ಇದರ ಸದುಪಯೋಗವಾಗಲಿದೆ. ಇದಲ್ಲದೆ 13 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಾಗುವುದು. ಈ ಯೋಜನೆಯಿಂದ ರೈತರಿಗೆ ಎರಡು ರೀತಿ ಲಾಭವಾಗಲಿದೆ. ಒಣ ಭೂಮಿ ಇರುವ ಜಮೀನುಗಳಿಗೆ ನೀರು ಒದಗುತ್ತದೆ ಎಂದರು.ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಬಿಜೆಪಿಯವರು ಕೇವಲ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ದ್ವೇಷದ ಭಾವನೆಗಳನ್ನು ಬಿತ್ತಿ, ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾರೆ. ಸುಳ್ಳೇ ಬಿಜೆಪಿಯವರ ಮನೆಯ ದೇವರಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರನ್ನು ಕುದರು.
ಉಪಮುಖ್ಯಮಂತ್ರಿ, ಬೃಹತ್ ನೀರಾವರಿ ಸಚಿವ ಡಿ.ಕೆ ಶಿವಕುಮಾರ ಮಾತನಾಡಿ ಕಮಲ ಕೆಸರಿನಲ್ಲಿದ್ದರೆ ಚಂದ, ತೆನೆಯು ಹೊಲದಲ್ಲಿದ್ದರೆ ಚಂದ, ಕೈ( ಕಾಂಗ್ರೆಸ್) ದಾನ ಧರ್ಮಕ್ಕಾಗಿ ಅಧಿಕಾರದಲ್ಲಿದ್ದರೆ ಚಂದವೋ ಚಂದ ಎಂಬ ನಾಣ್ನುಡಿಯಂತೆ ರಾಜ್ಯದ ಮತದಾರರು ಸ್ಪಷ್ಟ ಬಹುಮತ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಸದಾ ಸುಳ್ಳು ಭರವಸೆಗಳನ್ನ ನೀಡುವ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ನಡೆಸಿರುವುದನ್ನು ಮತದಾರರು ತಿರಸ್ಕರಿಸಿದ್ದಾರೆಂದು ಹೇಳಿದರು. ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮಾತನಾಡಿ ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಾಗ ಯಾವುದೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡದೆ ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಒದಗಿಸುವ ಮೂಲಕ ಕ್ಷೇತ್ರದ ಮತದಾರರ ಋಣ ತೀರಿಸಲು ಸಹಕರಿಸುವಂತೆ ಕೇಳಿದ್ದರು. ಅವರು ಜನಪರ ಕಾಳಜಿಯುಳ್ಳ ರಾಜಕಾರಣಿಯಾಗಿದ್ದಾರೆ. ಪಕ್ಕದ ಕ್ಷೇತ್ರದಲ್ಲಿ ನಾನು ಮಾಡಿರುವ ನೀರಾವರಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮತಕ್ಷೇತ್ರದಲ್ಲಿಯೂ ಕೂಡ ಒಣ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಹಗಲು ಶ್ರಮಿಸುತ್ತಿದ್ದಾರೆ. ಅವರ ಬೇಡಿಕೆಗೆ ತಕ್ಕಂತೆ ಇಂದು ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳು 1486 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ,ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ,Àುಹಾರಾಷ್ಟ್ರದ ಮಾಜಿ ಶಾಸಕ ವಿಶ್ವಜಿತ್ ಕದಂ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನು
Àಷ್ಠಾನಗೊಳ್ಳುವ ಮೂಲಕ ಅಥಣಿ ತಾಲೂಕಿನಲ್ಲಿ ಶೇ.95ರಷ್ಟು ರೈತರ ಜಮೀನುಗಳು ನೀರಾವರಿ ಸೌಲಭ್ಯ ಹೊಂದಲಿವೆ. ಮುಂಬರುವ ದಿನಗಳಲ್ಲಿ ಸರ್ಕಾರ ಕೃಷ್ಣಾ ನದಿ ತೀರದ ಸವಳು ಜವಳು ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ, ಮತ್ತು ರೈತರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೃಷಿ ಮಹಾವಿದ್ಯಾಲಯವನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಜತ್ತ ಶಾಸಕ ವಿಕ್ರಮ ಸಾವಂತ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಆನಂದ ನ್ಯಾಮಗೌಡ, ವೀರ ಕುಮಾರ ಪಾಟೀಲ್, ಕಾಕಾಸಾಯಿ ಪಾಟೀಲ, ಶ್ಯಾಮ ಘಾಟಗೆ, ಲಕ್ಷ್ಮಣ ಚಿಂಗಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಲುವ ತೇಲಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ಜಿ.ಪಂ ಕಾರ್ಯದರ್ಶಿ ರಾಹುಲ್ ಸಿಂಧೆ, ಕರ್ನಾಟಕ ನೀರಾವರಿ ನಿಗಮದ ರಾಕೇಶ್ ಸಿಂಗ್, ಕೃಷ್ಣಮೂರ್ತಿ ಕುಲಕರ್ಣಿ, ರಾಜೇಶ್ ಅಮೀನಭಾವಿ, ಬಿ ಆರ್ ರಾಠೋಡ, ಪ್ರವೀಣ ಹುಣಸಿಕಟ್ಟಿ, ವೀರಣ್ಣ ವಾಲಿ, ತಹಸೀಲ್ದಾರ ವಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗಡಿ ಗ್ರಾಮಸ್ಥರಿಂದ ಮನವಿ
ಗಡಿನಾಡು ಕೊಟ್ಟಲಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭಕ್ಕೆ ಮಹಾರಾಷ್ಟ್ರದ ಜತ್ತ ತಾಲೂಕಿನ ನೂರಾರು ಕನ್ನಡಿಗರು ನಾಮಫಲಕಗಳನ್ನ ಹಿಡಿದುಕೊಂಡು ಸಮಾರಂಭದಲ್ಲಿ ಭಾಗವಹಿಸಿದ್ದು ಆಕರ್ಷಣೀಯವಾಗಿತ್ತು. ಗಡಿಭಾಗದ ಅನೇಕ ಹಳ್ಳಿಗಳು ನೀರಾವರಿ ಸೌಲಭ್ಯ,ರಸ್ತೆ ಸುಧಾರಣೆ, ಕನ್ನಡ ಶಾಲೆಗಳ ಸುಧಾರಣೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ನಮ್ಮನ್ನ ಕರ್ನಾಟಕ ರಾಜ್ಯಕ್ಕೆ ಸೇರಿಸಿಕೊಳ್ಳಬೇಕು ಎಂದು ಘೋಷಣೆಗಳನ್ನು ಕೂಗುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದರು.