ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಸಾಧನೆ ಸಾಧ್ಯ
ಬೀದರ್:ಮಾ.7: ಧನಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಬೀದರ್ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದರು.
ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ನಡೆದ ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ಸಂಚಾಲಿತ ನೈಟಿಂಗೇಲ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಮಾಧ್ಯಮ ವ್ಯಾಮೋಹದ ನಡುವೆ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆ ನಡೆಸುವುದು ಸುಲಭದ ಮಾತಲ್ಲ. ಇದರ ಮಧ್ಯೆಯೂ ನೈಟಿಂಗೇಲ್ ಕನ್ನಡ ಮಾಧ್ಯಮ ಶಾಲೆಗಳು ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕರೂ ಆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ನೈಟಿಂಗೇಲ್ ಶಾಲೆಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿವೆ ಎಂದು ತಿಳಿಸಿದರು.
ಮಕ್ಕಳು ಉತ್ತಮ ಪ್ರಜೆಗಳಾಗಲು ಪ್ರಯತ್ನಿಸಬೇಕು. ಪಾಲಕರು, ಕಲಿತ ಶಾಲೆ ಹಾಗೂ ಊರಿಗೆ ಹೆಸರು ತರಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ಮಾತನಾಡಿ, ನೈಟಿಂಗೇಲ್ ಶಾಲೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತವೀರ ಹಜ್ಜರಗಿ, ಪಿಕೆಪಿಎಸ್ ಅಧ್ಯಕ್ಷ ಅನಿಲಕುಮಾರ ಹಜ್ಜರಗಿ, ಉಪಾಧ್ಯಕ್ಷ ಶಿವಕುಮಾರ ಮಾಲಿಪಾಟೀಲ, ಮಾಜಿ ಅಧ್ಯಕ್ಷ ಬಾಬುರಾವ್ ಮಾಲೆಗಾರ, ನಿರ್ದೇಶಕ ಭೀಮರಾವ್ ಗುತ್ತಿಗೆ, ಟ್ರಸ್ಟ್ ಕಾರ್ಯದರ್ಶಿ ದೇವಿದಾಸ ಭಾಲ್ಕಿಕರ್, ಪ್ರಮುಖರಾದ ಬಾಬುರಾವ್ ಮಾಲಿಪಾಟೀಲ, ವೀರೇಶ ಸ್ವಾಮಿ, ವೀರಶೆಟ್ಟಿ ಚನಶೆಟ್ಟಿ, ಸಿದ್ಧಾರೂಢ ಭಾಲ್ಕೆ, ಓಂನಾಥ ಬಿರಾದಾರ, ಲಕ್ಷ್ಮಣ ಅಲ್ಲೂರೆ, ಪ್ರಕಾಶ ಕುಂಬಾರ, ರವಿ ಜಾಧವ್ ಇದ್ದರು.
ರಾಣಿ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಶೀಲಾ ಪಾಂಚಾಳ ನಿರೂಪಿಸಿದರು. ಪ್ರೇಮಾ ಮಾಳೆಗಾರ ವಂದಿಸಿದರು.