ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಕಾಲುವೆಯಿಂದ ನೀರು ಹರಿಸಲು ಎಲ್ಲಾ ಕ್ರಮ

ಸಂಜೆವಾಣಿ ವಾರ್ತೆ
ದಾವಣಗೆರೆ; ಮಾ.೭; ಬರಗಾಲದಿಂದ ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆಯಾಗಲಿದ್ದು ಕುಡಿಯುವ ನೀರು ಪೂರೈಕೆ ಮತ್ತು ಮೇವಿನ ಪೂರೈಕೆಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು ಜನರಿಗೆ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
 ಅವರು  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 22 ಗ್ರಾಮಗಳಲ್ಲಿ 27 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮತ್ತು ಎಲ್ಲೆಲ್ಲಿ ಪ್ಲೋರೈಡ್‍ಯುಕ್ತ ನೀರು ಇದೆ ಅಂತಹ ಕಡೆ ಒಳ್ಳೆಯ ನೀರು ಪೂರೈಕೆ ಮಾಡಲು ಟ್ಯಾಂಕರ್ ಬಳಸಬೇಕು ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸೂಚನೆ ನೀಡಿದರು. ಈ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ ವಿ.ಶಿವಗಂಗಾ ಮಾತನಾಡಿ ನೀರು ಪೂರೈಕೆಗೆ ಟ್ಯಾಂಕರ್ ಬಳಕೆಗೆ ಅನುಮತಿ ನೀಡಿದ್ದು ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಬಾಡಿಗೆ ಪಡೆಯಲು ಷರತ್ತು ವಿಧಿಸಿದ್ದು ಇದರಿಂದ ಟ್ಯಾಂಕರ್ ಸಿಗುತ್ತಿಲ್ಲ ಎಂದಾಗ ಯಾವ ಟ್ಯಾಂಕರ್ ಪಡೆಯಲಾಗುತ್ತದೆ, ಅದೇ ಟ್ಯಾಂಕರ್‍ಗೆ ಜಿಪಿಎಸ್ ಅಳವಡಿಸಿಕೊಳ್ಳಬೇಕೆಂದರು.ಜಿಲ್ಲೆಯ ಬಹುಗ್ರಾಮ ಕುಡಿಯುವ ಯೋಜನೆ ಮತ್ತು ಚಿತ್ರದುರ್ಗಕ್ಕೆ ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಶಾಂತಿಸಾಗರದ ನೀರು ಕಡಿಮೆಯಾಗುತ್ತಿದೆ ಎಂದು ಚನ್ನಗಿರಿ ಶಾಸಕರು ಪ್ರಸ್ತಾಪಿಸಿದರು. ಈ ವೇಳೆ ಜಿಲ್ಲಾ ಸಚಿವರು ಶಾಂತಿಸಾಗರ ಕುಡಿಯುವ ನೀರಿಗೂ ಆದ್ಯತೆ ನೀಡಬೇಕು ಮತ್ತು ಅಚ್ಚಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೂ ನೀರು ಕೊಡುವ ಮೂಲಕ ಬೆಳೆದಿರುವ ತೋಟಗಾರಿಕೆ ಬೆಳೆಗಳನ್ನು ಉಳಿಸಬೇಕಾಗಿದೆ. ಇದಕ್ಕಾಗಿ ಮುಂದಿನ ಎರಡು ಹಂತದಲ್ಲಿ ನೀರು ಬಿಡುಗಡೆ ಮಾಡುವ ವೇಳೆ ಕೊನೆ ಭಾಗದ ರೈತರಿಗೆ ಮೊದಲ ಆದ್ಯತೆಯಾಗಿ ನೀರು ಕೊಡಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮತ್ತು ಕುಡಿಯುವ ನೀರಿನ ಪೂರೈಕೆಗೂ ಆದ್ಯತೆಯನ್ನು ನೀಡಲಾಗುತ್ತದೆ ಎಂದರು.