ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.07: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಕೃಷಿ ಮಹಾವಿದ್ಯಾಲಯ ಹಗರಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಎನ್ ಎಸ್ ಎಸ್ ಕ್ಯಾಂಪ್ ನ  ಪರಿಸರ ಜಾಗೃತಿ ಜಾಥಾದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ.ಶಿಬಿರದಲ್ಲಿ ಕಲಿತ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ಸಂಕಲ್ಪ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮ ನಡುವಳಿಕೆ ಇರಬೇಕು.
ಪ್ರತಿಯೊಬ್ಬ ಶಿಬಿರಾರ್ಥಿಗೂ ಪರಿಸರ ಕಾಳಜಿ ಇರಬೇಕು. ರೈತರ ಹಾಗೂ ಶ್ರಮಿಕ ವರ್ಗದವರ ಬಗ್ಗೆ ಗೌರವ ಭಾವನೆ ಇರಬೇಕು. ದೇಶ ನಮಗೇನು ಕೊಟ್ಟಿದೆ ಅನ್ನುವ ಬದಲು ದೇಶಕ್ಕಾಗಿ ನಾನೇನು ಕೊಟ್ಟಿದ್ದೇನೆ ಎಂಬ ಪ್ರಶ್ನೆ ನಮ್ಮಲ್ಲಿರಬೇಕು ಎಂದು ಹೇಳಿದರು.
ಹೊಟ್ಟೆಗೆ ಹಣ್ಣು ಕೃಷಿಗೆ ಮಣ್ಣು, ಕಾಡು ಬೆಳಸಿ ನಾಡು ಉಳಿಸಿ,ಕಾಡಿದ್ದರೆ ನಾಡು, ಗಿಡಮರ ನೆಡದಿದ್ದರೆ ಜಲಕ್ಷಾಮ ಉಂಟಾಗುತ್ತದೆ,ಆಸ್ತಿ ಅಂತಸ್ತಿಗಿಂತ ಆರೋಗ್ಯ ಹಿತಮುಖ್ಯ ಎಂಬ ಘೋಷಣೆ ಕೂಗುತ್ತಾ ಊರಿನ ಬೀದಿಗಳಲ್ಲಿ ಜಾಗೃತಿ ಮೂಡಿಸಿದರು.
ಶಿಬಿರದ ಯೋಜನಾಧಿಕಾರಿ ಡಾ.ನಾಗೇಶ ಬಸಪ್ಪ ಜಾನೆಕಲ್ಲು,ಗುಂಪಿನ ನಾಯಕರಾದ ಸರಸ್ವತಿ, ಅನಿಲ್ ಕುಮಾರ್, ರಾಮಚಂದ್ರ, ಶರಣ,ಸಂತೋಷ ಮುಂತಾದವರು ಉಪಸ್ಥಿತರಿದ್ದರು.