ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವುದು ಮುಖ್ಯ
ಸಂಜೆವಾಣಿ ವಾರ್ತೆ
ಶಿವಮೊಗ್ಗ: ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯ. ಶಿವಮೊಗ್ಗದ ಸ್ವೇಧ ಸಂಸ್ಥೆಯು ಸಾರ್ಥಕ ಸೇವೆ ಸಲ್ಲಿಸುತ್ತಿದೆ ಎಂದು ಮನೋವೈದ್ಯೆ ಡಾ. ಪವಿತ್ರ.ಕೆ.ಎಸ್. ಹೇಳಿದರು.ನಗರದ ಮಥುರಾ ಪಾರಾಡೈಸ್‌ನಲ್ಲಿ ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ವತಿಯಿಂದ ಎಂಎಸ್‌ಎಂಇ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಉದ್ಯಮದಲ್ಲಿ ಮಹಿಳೆಯರು ಯಶಸ್ಸು ಸಾಧಿಸುವುದು ಅಷ್ಟೊಂದು ಸುಲಭವಲ್ಲ. ಅನೇಕ ಒತ್ತಡ, ಹತಾಶೆಯ ನಡುವೆಯು ಉದ್ಯಮ ನಡೆಸಲು ಕಷ್ಟಕರ ಎನ್ನುವ ಸನ್ನಿವೇಶ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಧೃಢ ಮನೋಭಾವ ಹಾಗೂ ಸಕರಾತ್ಮಕ ನಿರ್ಧಾರಗಳಿಂದ ಮುನ್ನಡೆಸಬೇಕು. ಭವಿಷ್ಯದಲ್ಲಿ ಉತ್ತಮ ಬದುಕು ನಮ್ಮದಾಗುತ್ತದೆ ಎನ್ನುವ ಪರಿಕಲ್ಪನೆ ಹೊಂದಿರಬೇಕು ಎಂದು ತಿಳಿಸಿದರು.