ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗುತ್ತದೆ “ಶಿಕ್ಷಕಿ ಈರಮ್ಮ.
ಸಂಜೆವಾಣಿ ವಾರ್ತೆ
 ಬಳ್ಳಾರಿ, ಮಾ.07: ನಗರದರೇಡಿಯೋ ಪಾರ್ಕ್ ನ  ಸರ್ಕಾರಿ ಪ್ರೌಢಶಾಲೆಯಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ದತ್ತಿ ಉಪನ್ಯಾಸದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ನಿವೃತ್ತ ದೈಹಿಕ ಶಿಕ್ಷಕರಾದ ಕೆ ಜಿ ಕುಮಾರ್ ಗೌಡ ಮಾತನಾಡಿ,  ವಚನಗಳು ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿವೆ, 12ನೇ ಶತಮಾನದ ಶರಣರು ಮಹಿಳೆಯರಿಗೆ ಸಮಾನ ಆದ್ಯತೆ ಕೊಟ್ಟಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
 ಶಿಕ್ಷಕಿ ಈರಮ್ಮ ವಚನ ಸಾಹಿತ್ಯ ಮತ್ತು ಮಹಿಳೆ” ವಿಷಯವಾಗಿ ದತ್ತಿ ಉಪನ್ಯಾಸ ನೀಡುತ್ತ,  ವಚನ ಚಳುವಳಿಗಳ ಮೂಲಕ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಾಣಬಹುದು, ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೆ ಹಾಗೂ ತುಳಿತಕ್ಕೆ ಒಳಪಟ್ಟ ಮಹಿಳೆಯರಿಗೆ ನ್ಯಾಯ ಸಿಗುವಂತೆ 12ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜವನ್ನು ಪರಿವರ್ತಿಸುವ ಕೆಲಸವನ್ನು ಮಾಡಿದ್ದಾರೆ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗುತ್ತದೆ, ಮಹಿಳೆ ತನಗೆ ಬರುವ ಸಮಸ್ಯೆಗಳನ್ನು ಮೆಟ್ಟಿ ನಿಂತಾಗ ಆ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತವೆ ಎಂದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಪ್ರೌಢಶಾಲೆಯ  ಉಪ ಪ್ರಾಚಾರ್ಯರಾದ ಆರ್ ಶಿವಕುಮಾರ್ ಮಾತನಾಡಿ, ಶಾಲೆ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದಾಗ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ವಚನಗಳ ಮಹತ್ವವನ್ನು ತಿಳಿಯಲು ಸಾಧ್ಯ ಇಂತಹ ಕಾರ್ಯಕ್ರಮಗಳನ್ನು ತಾವು ಸದಾ ಮಾಡುತ್ತೀರಿ ನಾವು ನಿಮಗೆ ಬೆಂಬಲಿಗರಾಗಿ ನಿಲ್ಲುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ. ಹನುಮಂತರಾವ್ ಮಾತನಾಡಿ, ಮಕ್ಕಳಿಗೆ ಏಕಾಗ್ರತೆ ಬಹಳ ಮುಖ್ಯ ಪ್ರತಿನಿತ್ಯ ಬೆಳಿಗ್ಗೆ ಕೆಲವು ಸಮಯ ಧ್ಯಾನ ಯೋಗ ಮಾಡಿದಾಗ ನೀವು ಓದಿದ ವಿಷಯ ಮನನವಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕರಾದ ಎರಿಸ್ವಾಮಿ ರವರು ವಚನ ಕಾರರು ತಮ್ಮ ಬರಹದ ಮೂಲಕ ಸಮಾಜಕ್ಕೆ ದಿಕ್ಸೂಚಿಯಾಗಿ ನಿಂತಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಶ್ರೀಮತಿ ಸುಶೀಲಾ ಶಿರೂರ್ ಮತ್ತು ಶ್ರೀಮತಿ ಎನ್ ಡಿ ವೆಂಕಮ್ಮ ಕನ್ನಡ ಶಿಕ್ಷಕರಾದ ಸಿದ್ದರಾಮಪ್ಪ , ಅಜಯ್ ಬಣಕಾರ್, ದೈಹಿಕ ಶಿಕ್ಷಕರಾದ ಭೀಮಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ಮಕ್ಕಳು ಮತ್ತು ಸಂಗೀತ ಶಿಕ್ಷಕರಾದ ವೀರಭದ್ರಯ್ಯ ರವರು ಪ್ರಾರ್ಥನಾ ಗೀತೆಯನ್ನು ನೆರವೇರಿಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ. ವಿ.ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನು ನುಡಿದರು.
ಅತಿಥಿಗಳನ್ನು ಮತ್ತು ದತ್ತಿದಾನಿಗಳನ್ನು ಗೌರವಿಸಿ ಸತ್ಕರಿಸಲಾಯಿತು. ಪರಿಷತ್ತಿನ ಕೋಶಾಧ್ಯಕ್ಷರಾದ ಶರಣಬಸವ ಎಂ ರವರು ಕೊನೆಗೆ ವಂದಿಸಿದರು.