ಮಿಲಾದ್ ಸಮಾವೇಶ- ಸಹಸ್ರಾರು ಮಂದಿಯ ಕಾಲ್ನಡಿಗೆ ಜಾಥಾದಲ್ಲಿ ಬ್ರಹತ್ ಕಾಲ್ನಡಿಗೆ ಜಾಥಾದಲ್ಲಿ ಸಹಸ್ರಾರು ಮಂದಿ ಭಾಗಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಯುವಜನ ಪರಿಷತ್ ಪುತ್ತೂರು ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಜನ್ಮದಿನಾಚರಣೆಯ ಅಂಗವಾಗಿ ಸೋಮವಾರ ಸಂಜೆ ನಡೆದ ಬೃಹತ್ ಮಿಲಾದ್ ಸಮಾವೇಶದ ಕಾಲ್ನಡಿಗೆ ಜಾಥಾದಲ್ಲಿ ಸಹಸ್ರಾರು ಮಂದಿ ಭಾಗವಹಿಸದ್ದರು.
ನಗರದ ದರ್ಬೆ ಬೈಪಾಸ್ ವೃತ್ತದಿಂದ ಆರಂಭಿಸಿ ಸಮಾವೇಶ ನಡೆಯುವ ಸ್ಥಳವಾದ ಕಿಲ್ಲೆ ಮೈದಾನದ ತನಕ ನಗರದ ಮುಖ್ಯ ರಸ್ತೆಯಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಪುತ್ತೂರು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ ಅವರು ಉದ್ಯಮಿ ಹುಸೈನಾರ್ ಹಾಜಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾವು ದರ್ಬೆಯಿಂದ ಮುಖ್ಯರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ಪ್ರವಾದಿಯನ್ನು ಬಣ್ಣಿಸುವ ಗಾಯನಗಳು, ದಫ್ ಪ್ರದರ್ಶನ ಹಾಗೂ ಹೂಗುಚ್ಚ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಹಸಿರು ಧ್ವಜ ಸೇರಿದಂತೆ ವಿವಿಧ ಬಣ್ಣಗಳ ಧ್ವಜಗಳನ್ನು ಪ್ರದರ್ಶಿಸುತ್ತಾ ಜಾಥಾ ಸಾಗಿ ಬಂದಿತ್ತು.
ಬಳಿಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮಿಲಾದ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಿದರು. ಧಾರ್ಮಿಕ ಮುಖಂಡ ಅಮ್ಮಾರ್ ಮುಈನಿ ನೀರಕಟ್ಟೆ ಸಮಾವೇಶ ಉದ್ಘಾಟಿಸಿದರು. ಉದ್ಯಮಿ ಪಿ.ಎ. ಉಸ್ಮಾನ್ ಹಾಜಿ ಚೆನ್ನಾರು ಸಂಪ್ಯ ಅಧ್ಯಕ್ಷತೆ ವಹಿಸಿದ್ದರು. ಶರೀಫ್ ಅಶ್ರಫಿ ಕಾಞಂಗಾಡ್ ಪ್ರಭಾಷಣ ನೀಡಿದರು. ಕಾರ್ಯಕ್ರಮದಲ್ಲಿ ಕಂಬಳಬೆಟ್ಟು ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಮುಈನುದ್ದೀನ್ ಖಾದಿರಿ ತಂಡದಿಂದ ‘ನಾತೇ ಶರೀಫ್ ಕಾರ್ಯಕ್ರಮ ನಡೆಯಿತು.
ಪುತ್ತೂರು ಪೊಲೀಸರು ಜಾಥಾ ಮತ್ತು ಸಮಾವೇಶಕ್ಕೆ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.