ಬೆಡ್ ಶೀಟ್ ಮಾರುವ ನೆಪದಲ್ಲಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ; ದೂರು ದಾಖಲು
ಉಡುಪಿ-ಬೆಡ್ ಶೀಟ್ ಮಾರಾಟ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿ, ವೃದ್ಧೆಯೊಬ್ಬರ ಮನೆಗೆ ನುಗ್ಗಿರುವ ಘಟನೆ ಉಡುಪಿ ಅಂಬಲಪಾಡಿ ಸಮೀಪದಲ್ಲಿ ನಡೆದಿರುವುದಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರವೀಣ್ ಎಂಬುವವರು ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರ ತಾಯಿ ವಿನೋದಿನಿ (೮೨) ಉಡುಪಿಯ ಅಂಬಲಪಾಡಿಯ ಶ್ಯಾಮ್ ಸದನದಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು. ಸೆ. ೧೪ರ ಸಂಜೆ ಅಪರಿಚಿತ ವ್ಯಕ್ತಿಯೋರ್ವ ಬೆಡ್ ಶೀಟ್ ಮಾರಾಟ ಮಾಡುವ ನೆಪದಲ್ಲಿ ವಿನೋದಿನಿ ಅವರ ರೂಂ ಪ್ರವೇಶಿಸಿ ಬೆಡ್ ಶೀಟ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ.
ಇದನ್ನು ಗಮನಿಸಿದ ಮನೆಯ ಕೇರ್ ಟೇಕರ್ ತುಳಜಾ ಅವರು ಪ್ಲಂಬಿಂಗ್ ಕೆಲಸಕ್ಕೆ ಬಂದಿದ್ದ ಪ್ರಶಾಂತ್ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಹೊರಗಡೆ ಬಂದು ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಪ್ರವೀಣ್ ಸ್ನೇಹಿತ ಕಿರಣ್ ಕುಮಾರ್ ಅವರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ವರದಿಯಾಗಿದೆ.