ಮೆಡಿಕಲ್ ಕಾಲೇಜಿಗಾಗಿ ಬೆಂಗಳೂರು ಜಾಥಾಕ್ಕೂ ಸಿದ್ಧ-ಅಶೋಕ್ ರೈ

ಪುತ್ತೂರು: ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಅತೀ ಅಗತ್ಯ. ಈ ಕಾಲೇಜಿಗಾಗಿ ಹೋರಾಟ ನಡೆಸುವುದು ಅನಿವಾರ್ಯವಾದರೆ ಪಕ್ಷಾತೀತ ನೆಲೆಯಲ್ಲಿ ಬೆಂಗಳೂರಿಗೆ ಜಾಥಾ ನಡೆಸುವ ಮೂಲಕ ಹಕ್ಕೊತ್ತಾಯ ಮಂಡನೆಗೆ ನಾನು ಸದಾ ಸಿದ್ಧ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಮಂಜಲ್ಪಡ್ಪು ಉದಯಗಿರಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮೆಡಿಕಲ್ ಕಾಲೇಜು ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರದ ಮುಂದೆ ಇಟ್ಟಿದ್ದೇನೆ. ಮುಖ್ಯಮಂತ್ರಿ ಜತೆಗೆ ಮಾತನಾಡಿದಾಗ ಮುಂದಿನ ಬಜೆಟ್ ನಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ನಮ್ಮ ಪ್ರಯತ್ನ ಮಾಡುತ್ತಲೇ ಇರಬೇಕು. ಒಂದು ವೇಳೆ ಮುಂದಿನ ಬಜೆಟ್ ನಲ್ಲಿ ಸಿಗದಿದ್ದರೆ ಹೋರಾಟ ಮತ್ತಷ್ಟು ಬಲಪಡಿಸಬೇಕಾಗುತ್ತದೆ. ಇದಕ್ಕೆ ಎಲ್ಲಾ ಜನರ ಸಹಕಾರ ಅಗತ್ಯ ಎಂದು ಅವರು ಹೇಳಿದರು.  ಹೋರಾಟ ಸಮಿತಿ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಮಾತನಾಡಿ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ತಾಲೂಕಿಗೊಂದು ಶಾಲೆ, ಗ್ರಾಮ, ಸಹಕಾರ ಬ್ಯಾಂಕ್ ಎಂಬ ನೆಲೆಯಲ್ಲಿ ಪುತ್ತೂರನ್ನು ಮಾದರಿಯನ್ನಾಗಿ ಮಾಡಿದ್ದರು. ಈ ನಿಟ್ಟಿನಲ್ಲಿ ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ಮೆಡಿಕಲ್ ಕಾಲೇಜು ಸ್ಥಾಪನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳ ಮಾಜಿ ಶಾಸಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಒಟ್ಟಿಗೆ ಸೇರಿಸಿ ನಮ್ಮ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.
ವೇದಿಕೆಯಲ್ಲಿ ಹೋರಾಟ ಸಮಿತಿಯ ವಿಶ್ವಪ್ರಸಾದ್ ಸೇಡಿಯಾಪು ಉಪಸ್ಥಿತರಿದ್ದರು. ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.