ಸಾಮಾಜಿಕ ಬದ್ಧತೆಗಾಗಿ ಇಂಜಿನಿಯರ್‍ಸ್ ‘ವಾಕ್‌ಥಾನ್
ಪುತ್ತೂರು: ಸಾಮಾಜಿಕ ಬದ್ಧತೆ ವೃತ್ತಿಪರ ಒಗ್ಗಟ್ಟು ಚಿಂತನೆಯೊಂದಿಗೆ ಹಮ್ಮಿಕೊಂಡಿರುವ ‘ವಾಕ್‌ಥಾನ್ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಜನಜಾಗೃತಿಯಾಗಿದೆ. ಸಮಾಜದಲ್ಲಿ ಅರಿವು ಮೂಡಿಸುವ ಹಿನ್ನಲೆಯಲ್ಲಿ ಈ ವಿನೂತನ ನಡಿಗೆಯ ಕಾರ್ಯಕ್ರಮ ವೃತ್ತಿಪರ ಸಿವಿಲ್ ಇಂಜಿನಿಯರ್‍ಸ್ ಕಾಯಿದೆ ಜಾರಿಗೆ ಸಿದ್ಧವಾಗುತ್ತಿರುವ ಈ ಸಂದರ್ಭ ಉತ್ತಮ ಸಂದೇಶ ನೀಡಲಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‍ಸ್ ಇಂಡಿಯಾ ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ ಅವರು ಅಭಿಪ್ರಾಯಪಟ್ಟರು.
ಸೋಮವಾರ ಸಂಜೆ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‍ಸ್ ಇಂಡಿಯಾ ಪುತ್ತೂರು ಸೆಂಟರ್ ವತಿಯಿಂದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಪುತ್ತೂರು ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದ ಬಳಿಯ ಗಾಂಧಿಕಟ್ಟೆಯಿಂದ ಬೊಳುವಾರು ತನಕ ನಡೆದ ‘ವಾಕ್‌ಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಮಾತನಾಡಿ,  ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕವಾದ ಬದ್ಧತೆ ಅಗತ್ಯ. ಇದರಿಂದ ಸಮಾಜಕ್ಕೊಂದು ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಇದರೊಂದಿಗೆ ಯಾವುದೇ ವೃತ್ತಿ ಇರಬಹುದು ಅದರಲ್ಲಿ ಬಾಗಿಯಾಗುವ ಮಂದಿ ಒಗ್ಗಟ್ಟಿನಿಂದ ಇದ್ದರೆ ಹಲವು ಸಮಸ್ಯೆಗಳಿಂದ ರಕ್ಷಣೆ ಪಡೆದುಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿನೋದ್‌ಕುಮಾರ್ ಕೆ, ಕೋಶಾಧಿಕಾರಿ ಚೇತನ್, ಸಮಿತಿ ಸದಸ್ಯರಾದ ಶಿವರಾಮ್, ಚಂದ್ರಶೇಖರ್ ಆಳ್ವ,  ಪ್ರಸನ್ನ ದರ್ಬೆ, ಆದರ್ಶ್ ಸೇರಿದಂತೆ ಹಲವು ಮಂದಿ ಇಂಜಿನಿಯರ್‌ಗಳು ಪಾಲ್ಗೊಂಡರು. ಜಾಗೃತಿ ನಡಿಗೆಯ ಬಳಿಕ ಸಂಜೆ ದರ್ಬೆ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ಎಂಜಿನಿಯರ್‍ಸ್ ಡೇ ಆಚರಣೆ ನಡೆಯಿತು.