ಶೇ.60 ಕನ್ನಡ ಭಾಷೆ ಇರಲಿ : ಕರವೇ ಜಾಗೃತಿ ಅಭಿಯಾನ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ6: ವಿಜಯನಗರ ಜಿಲ್ಲೆಯ ಅಂಗಡಿ-ಮುಂಗಟ್ಟುಗಳಿಗೆ ಶೇ.60 ಕನ್ನಡದಲ್ಲಿ ನಾಮಫಲಕ ಕಡ್ಡಾಯಗೊಳಿಸಲು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಜಾಗೃತಿ ಅಭಿಯಾನ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಆರಂಭವಾದ ಜನ ಜಾಗೃತಿ ರ್ಯಾಲಿ ವಿವಿಧ ಬೀದಿಗಳಲ್ಲಿ  ಸಂಚರಿಸಿ, ಶಾಪಿಂಗ್ ಮಾಲ್, ಖಾಸಗಿ ಕಚೇರಿಗಳು. ಶಾಲಾ-ಕಾಲೇಜ್  ಸೇರಿದಂತೆ ಅಂಗಡಿ-ಮುಂಗಟ್ಟುಗಳ ಮಾಲೀಕರಿಗೆ ಶೀಘ್ರ ನಾಮಫಲಕ ಕನ್ನಡದಲ್ಲಿ ಬರೆಸುವಂತೆ ಕರ ಪತ್ರ ಹಂಚಿದರು ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ಕರವೇ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿದೇಯಕವನ್ನು ವಿಧಾನ ಮಂಡಲದ ಉಭಯ ಸಧನಗಳಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಂಡಿದೆ. ವಿದೇಯಕಕ್ಕೆ ರಾಜ್ಯಪಾಲರು ಸಹಿ ಹಾಕುವ ಮೂಲಕ ಇದೀಗ ಕಾನೂನು ಜಾರಿಯಾಗಿದೆ. ಕಾನೂನು ಅನುಸಾರ ಎಲ್ಲಾ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಶೇ.60 ಕನ್ನಡದಲ್ಲಿ ಬರೆದಿರಬೇಕು. ಕನ್ನಡ ಅಕ್ಷರಗಳೇ ಮೊದಲ ಸ್ಥಾನದಲ್ಲಿರಬೇಕು. ಜಾಹೀರಾತು ಫಲಕಗಳು ಕೂಡ ಕನ್ನಡದಲ್ಲಿರಬೇಕು ಇದನ್ನು ಎಲ್ಲಾ ಉದ್ಯಮಿಗಳು, ವಾಪರಸ್ಥರು ಪಾಲಿಸುವುದು ಕಡ್ಡಾಯವಾಗಿದೆ. ನಾಮಫಲಕ  ಕನ್ನಡೀಕರಣಗೊಳ್ಳದಿದ್ದಲ್ಲಿ ಕರವೇ ಉಗ್ರ ಸ್ವರೂಪ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು. ಮುಖಂಡರಾದ ಶ್ರೀನಿವಾಸ, ಎಸ್.ಎಮ್.ಜಾಫರ್. ಮಹೇಬೂಬ್ ಭಾಷಾ, ಎಂ.ಎಸ್.ಗೌಸ್, ರಮೇಶ್ ಪಾಲ್ಗೊಂಡಿದ್ದರು.