ರಸಪ್ರಶ್ನೆ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೭: ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದರಿಮದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ರಾಷ್ಟ್ರೀಯ ಆವಿಷ್ಕಾರ್ ಕಾರ್ಯಕ್ರಮದಡಿ ಸಮಗ್ರ ಶಿಕ್ಷಣ ಕರ್ನಾಟಕ, ಡಿ.ಎಸ್.ಇ.ಆರ್.ಟಿ ವತಿಯಿಂದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿ ಜ್ಞಾನಾಭಿವೃದ್ಧಿ ಉಂಟು ಮಾಡಲು ಸ್ಪರ್ಧಾ ಕಾರ್ಯಕ್ರಮ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಪಠ್ಯಾಧಾರಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಲಿಕಾ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯಪೂರ್ಣ ಸ್ಪರ್ಧಾ ಭಾವನೆ ಬೆಳೆಸಿಕೊಳ್ಳಬೇಕು. ಸೋಲು ಗೆಲುವಿನ ಮೆಟ್ಟಿಲಾಗಿದ್ದು ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ತಾಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಿಗೆ ಜೂನಿಯರ್ ಹಂತ(5 ರಿಂದ 7ನೇ ತರಗತಿ) ಸೀನಿಯರ್ ಹಂತ(8 ರಿಂದ 10 ನೇ ತರಗತಿ) ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಬೆಂಗಳೂರಿನ ನಗರ ಡಯಟ್‌ನಲ್ಲಿ ಮಾರ್ಚ್ 7 ರಂದು ನಡೆಯಲಿರುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.ಕ್ವಿಜ್ ಮಾಸ್ಟರ್ ಕೆ.ಆರ್.ಲೋಕೇಶ್ ರವರು ನೇರ ಸುತ್ತು, ಚಿತ್ರ ಸುತ್ತು, ಬಹು ಆಯ್ಕೆ ಸುತ್ತು, ಬಂಪರ್ ಸುತ್ತು, ಆಡಿಯೋ ಸುತ್ತು, ಗಣಿತ ಮತ್ತು ವಿಜ್ಞಾನ ಸುತ್ತುಗಳ ಮೂಲಕ ತಂತ್ರಜ್ಞಾನ ಆಧಾರಿತವಾಗಿ ವಿದ್ಯಾರ್ಥಿಗಳ ಕುತೂಹಲ ಹೆಚ್ಚಿಸಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಕರ್ಷಣೀಯವಾಗಿ ನಡೆಸಿಕೊಟ್ಟರು.ಹಿರಿಯ ಉಪನ್ಯಾಸಕ ತಿಪ್ಪೇಸ್ವಾಮಿ, ಸಹ ನೋಡಲ್ ಅಧಿಕಾರಿ ಎನ್.ಮಂಜುನಾಥ್, ಮುಖ್ಯ ಶಿಕ್ಷಕ ಸುರೇಂದ್ರ ನಾಯಕ್, ಶಿಕ್ಷಕ ವೀರಭದ್ರಯ್ಯ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇದ್ದರು.