ನೀರನ್ನು ವೈಜ್ಞಾನಿಕವಾಗಿ ಬಳಸಿ ಹೆಚ್ಚಿನ ಲಾಭ ಪಡೆಯಿರಿ: ಬಿ.ಆರ್.ಪಾಟೀಲ
ಮಾದನಹಿಪ್ಪರಗಿ:ಮಾ.7: ನೀರು ಸಮಸ್ಯೆ ಜಾಗತಿಕ ಸಮಸ್ಯೆಯಾಗುತ್ತಿದೆ. ನೀರು ರಾಷ್ಟ್ರೀಕರಣವಾಗಬೇಕು. ರೈತರು ನೀರನ್ನು ವೈಜ್ಞಾನಿಕವಾಗಿ ಬಳಸಿ ಹೆಚ್ಚಿನ ಲಾಭ ಪಡೆಯಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ ಹೇಳಿದರು.
ನಿನ್ನೆ ದಿ.6ರಂದು ಬುಧವಾರ ಸಂಜೆ ಮಾದನಹಿಪ್ಪರಗಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ 6 ಕೋಟಿ ವೆಚ್ಚದ ಮಾದನಹಿಪ್ಪರಗಿಯಿಂದ ಮೈಂದರಗಿ ರಸ್ತೆ, 4 ಕೋಟಿ ರೂ. ವೆಚ್ಚದ ಮಾದನಹಿಪ್ಪರಗಿ ಕ್ರಾಸದಿಂದ ಜಳಕಿ ರಸ್ತೆ, ಮತ್ತು 2 ಕೋಟಿ ರೂ ವೆಚ್ಚದಲ್ಲಿ ಚಲಗೇರಾ ರಸ್ತೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡುತ್ತ, ರೈತರು ಕಷ್ಟದಲ್ಲಿದ್ದಾರೆ ಕೇಂದ್ರ ಸರಕಾರಕ್ಕೆ ರೈತರ ಸಾಲ ಮನ್ನಾ ಮತ್ತು ಪರಿಹಾರ ಕೇಳಿದರೂ ನಯಾ ಪೈಸೆ ಕೊಟ್ಟಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತರಿಕ ಪರಿಹಾರ ರೂಪದಲ್ಲಿ 2 ಸಾವಿರ ರೂ.ಗಳನ್ನು ರೈತರ ಖಾತೆಗೆ ನೀಡಿದ್ದಾರೆ. ಆಳಂದ ತಾಲೂಕಿನ ರೈತರಿಗೆ 60 ಕೋಟಿ ರೂ. ಬೆಳೆ ವಿಮೆ ದುಡ್ಡು ಬಂದಿದೆ. ರಾಜ್ಯದ ಯಾವ ತಾಲೂಕಿಗೂ ಇಷ್ಟೊಂದು ದುಡ್ಡು ಬಂದಿಲ್ಲ. ಈಗ ಶೇ.25 ರಷ್ಟು ಹಣ ಬಿಡುಗಡೆಯಾಗಿದ್ದು ಉಳಿದದ್ದು ಬಿಡುಗಡೆಯಾಗಬೇಕಿದೆ. ತಾಲೂಕಿನಲ್ಲಿ ನೀರಿನ ಸಮಸ್ಯೆಗೆ ಶಿರಪುರ ಮಾದರಿಯ ಚೆಕ್ಕ ಡ್ಯಾಂಗಳನ್ನು ನಿರ್ಮಿಸುವುದು. ಅಮರ್ಜಾ ಡ್ಯಾಂ ನಿಂದ ಕೆಲವು ಹಳ್ಳಿಗಳಿಗೆ ಮಾತ್ರ ನೀರು ಹೋಗಿದೆ. ವಿರೇಂದ್ರ ಪಾಟೀಲರು ಮುಖ್ಯಮಂತ್ರಿಗಳಿದ್ದಾಗ ಪ್ರಾರಂಭದಲ್ಲಿ ಐದೂವರೆ ಕೋಟಿ ವೆಚ್ಚದ ಕಾಮಗಾರಿ ಈಗ 40 ವರ್ಷಗಳಲ್ಲಿ 225 ಕೋ. ರೂ.ಖರ್ಚಾದರೂ ನಾಲ್ಕೈದು ಹಳ್ಳಿಗಳಿಗೆ ಮಾತ್ರ ನೀರು ಹರಿದಿದೆ. ಇದರ ನೀರಿನ ಸಾಮಥ್ರ್ಯ ಇರುವುದು 1.5 ಟಿಎಮಸಿ ಮಾತ್ರ. ಮಹಾರಾಷ್ಟ್ರದ ಬೋರಿ ನದಿಯಿಂದ 350 ಕೋ. ವೆಚ್ಚದಲ್ಲಿ ನೀರು ತರುವ ಯೋಜನೆ 15 ತಿಂಗಳಲ್ಲಿ ಮುಗಿಯಬೇಕಾಗಿತ್ತು. ಆದರೆ 8 ವರ್ಷಗಳಾದರೂ ಮುಗಿದಿಲ್ಲ. ಈಗ ಮತ್ತೆ ಅದಕ್ಕೆ ಚಾಲನೆ ಸಿಕ್ಕಿದೆ. ಮಾದನಹಿಪ್ಪರಗಿ, ಸರಸಂಬಿ, ನಾಗಲೇಗಾಂವ್, ಕೇರೂರ ಕೆರೆ ತುಂಬುವ ಯೋಜನೆಗೆ 105 ಕೋ. ಸರಕರದಿಂದ ಮಂಜೂರ ಸಿಕ್ಕಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗುರುಶಾಂತಪ್ಪ ಪಾಟೀಲ, ಎಇಇ ಆನಂದ ಮಾತನಾಡಿದರು. ಅಭಿನವ ಶಿವಲಿಂಗ ಸ್ವಾಮಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಈರಣ್ಣ ಮೈಂದರಗಿ, ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ, ಮುಖಂಡರಾದ ರಾಜಶೇಖರ ಯಂಕಂಚಿ, ಮಲ್ಲಯ್ಯ ಸ್ವಾಮಿ, ಗುರುಶಾಂತಪ್ಪ ಪಾಟೀಲ ಭೂಸನೂರ, ಮಹಾಂತೇಶ ಬಳಗಾನೂರ, ಶರಣಗೌಡ ಪಾಟೀಲ, ಗಣೇಶ ಒಡ್ಡಳ್ಳಿ ವೇದಿಕೆಯ ಮೇಲಿದ್ದರು. ಮಲ್ಲಯ್ಯ ಸ್ವಾಮಿ, ಶಿವಶಂಕರ ಪಾಟೀಲ, ಬಿ.ಜಿ.ಪಾಟೀಲ, ವಿಶ್ವನಾಥ ಸರಸಂಬಿ, ಮಹಾದೇವಯ್ಯ ಸ್ವಾಮಿ, ಶಿವಲಿಂಗಪ್ಪ ಜಮಾದಾರ, ನಿಲೇಶ ತೋಳನೂರ, ಹಿರಗಪ್ಪ ದೊಡಮನಿ, ಆಕಾಶ ಪಾಟೀಲ, ಬೋಗೇಶ ಪಾಟೀಲ, ಶಾಂತಮಲ್ಲಯ್ಯ ಸ್ವಾಮಿ, ಮಹಾಂತಪ್ಪ ಬನ್ನಿಗಿಡ, ಕಲ್ಲಪ್ಪ ಸಿಂಗಶೆಟ್ಟಿ, ಮಹಿಬೂಬ್ ಫಣಿಬಂದ್ ಅನೇಕ ಮುಖಂಡರುಗಳು ಭಾಗವಹಿಸಿದ್ದರು.