ಶಿವರಾತ್ರಿ ಜಾತ್ರೆಗೆ ಮಾದಪ್ಪನ ಭಕ್ತರದಂಡು: ನದಿ ದಾಟಿ ಬರುತ್ತಿರುವ ಲಕ್ಷಾಂತರ ಮಂದಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.07- ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಭಕ್ತರು ತೆರಳುತ್ತಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಾದಯಾತ್ರೆ ಭಕ್ತಾದಿಗಳಿಗೆ ಎಲ್ಲಾರೀತಿಯ ಮೂಲಭೂತ ಸೌಲಭ್ಯಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ಮೂರು ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕನಕಪುರ, ರಾಮನಗರ, ಬಿಡದಿ, ಚನ್ನಪಟ್ಟಣ ಗ್ರಾಮದವರು ಕಾವೇರಿ ನದಿ ಸಂಗಮದ ಮೂಲಕ ಆಗಮಿಸುತ್ತಿದ್ದಾರೆ .ಇದಲ್ಲದೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ.
ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬವಾಗಿದ್ದು ರಾತ್ರಿಯಿಡಿ ದೇವರ ಸ್ಮರಣೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಹರಕೆ ಹೊತ್ತು ಭಕ್ತಾದಿಗಳು ಹಗಲು ರಾತ್ರಿ ಚಳಿ ಬಿಸಿಲಿನಲ್ಲಿ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಶಾಗ್ಯ ಗ್ರಾಮದ ಬಳಿ ಪಾದಯಾತ್ರೆಯ ಮೂಲಕ ಬರುವಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ವರ್ಷವೂ ನೂರಾರು ಭಕ್ತಾದಿಗಳು ಸರದಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾರ್ಗ ಮಧ್ಯದ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾ ಅಡುಗೆ ತಯಾರಿಸಿ ಒಟ್ಟಿಗೆ ಸೇರಿ ಸಹ ಭೋಜನವನ್ನು ಸವಿದು ಸಂಚರಿಸುತ್ತಿರುವುದು ಹನೂರು ಭಾಗದಲ್ಲಿಯ ಥೇಚ್ಛವಾಗಿಕಂಡುಬರುತ್ತಿದೆ.
ಪಾದಯಾತ್ರೆಗಳ ಅನುಕೂಲಕ್ಕಾಗಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಸುಮಾರು 10 ಕಡೆ ಮಿನಿ ಟ್ಯಾಂಕ್ ಗಳನ್ನು ಇಡಲಾಗಿದ್ದು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಭಕ್ತಾದಿಗಳ ಆರೋಗ್ಯ ದೃಷ್ಟಿಯಿಂದ ತಾಳು ಬೆಟ್ಟದಲ್ಲಿತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರತೆರೆಯಲಾಗಿದೆ. ಬರುವಂತಹ ಭಕ್ತಾದಿಗಳಿಗೆ ತೊಂದರೆಯಾಗದಿರಲಿ ಎಂದು ಐವತ್ತಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳನ್ನು ಇಡಲಾಗುತ್ತಿದೆ.
ಪಾದಯಾತ್ರೆಯ ಮೂಲಕ ಬರುವಂತಹ ಭಕ್ತಾದಿಗಳು ತಾವು ಬಳಸುವ ಪ್ಲಾಸ್ಟಿಕ್ ರಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕದೆ ಪ್ರಾಧಿಕಾರದ ವತಿಯಿಂದ ಇಡಲಾಗಿರುವ ಕಸದ ಬುಟ್ಟಿಗಳನ್ನು ಬಳಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ಮಲೆ ಮಹದೇಶ್ವರ ಬೆಟ್ಟ ವನ್ನಾಗಿ ಮಾಡಲು ಪ್ರತಿಯೊಬ್ಬ ಭಕ್ತರು ಸಹಕರಿಸಬೇಕು, ಕುಡಿಯುವ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಿಕೊಳ್ಳಬೇಕು ಎಂದು ಪ್ರಾಧಿಕಾರದವರು ಮನವಿ ಮಾಡಿದ್ದಾರೆ.
ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಬರುತ್ತಿರುವ ದೇವರ ಗುಡ್ಡರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತ ಭಕ್ತಿ ಭಾವದಿಂದ ತೆರಳುತ್ತಿದ್ದರೆ ಯುವಕರುತಮಟೆ ಬಾರಿಸುತ್ತ ಅಲ್ಲಲ್ಲಿಕುಣಿದು ಕುಪ್ಪಳಿಸುತ್ತಾ ತೆರಳುತ್ತಿದ್ದಾರೆ.
ಇನ್ನು ವಯೋವೃದ್ಧರು ಮಾದಪ್ಪನ ಹಾಡುಗಳನ್ನು ಹಾಡಿಕೊಂಡು ಉಘೇ ಮಾದಪ್ಪ ಉಘೇ ಮೈಕಾರ ಎಂದು ಘೋಷಣೆ ಕೂಗಿ ಭಕ್ತಿ ಭಾವದಿಂದ ತೆರಳುತ್ತಿರುವುದು ಸಾಮಾನ್ಯವಾಗಿದೆ.