ಎಥನಾಲ್ ಘಟಕ ಸ್ಥಾಪನೆಗೆ ಸಾರ್ವಜನಿಕರಿಂದ ಸಂಪೂರ್ಣ ವಿರೋಧ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.07: ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಎಥನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಸಾರ್ವಜನಿಕರ ಪೂರ್ಣ ವಿರೋಧವಿದ್ದು ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಘೋಷಿಸಿದರು.
ತಾಲೂಕಿನ ಮಾಕವಳ್ಳಿ ಬಳಿಯಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಬ್ಬು ಉಪ ಉತ್ಪನ್ನಗಳನ್ನು ಆಧರಿಸಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಮುಂದಾಗಿದೆ. ಇದನ್ನು ವಿರೋಧಿಸಿ ಪರಿಸರ ಹೋರಾಟಗಾರರು ಮತ್ತು ತಾಲೂಕು ರೈತಸಂಘ ಹೋರಾಟ ನಡೆಸುತ್ತಿದೆ. ಕಾರ್ಖಾನೆಯ ನೂತನ ಘಟಕಗಳ ಸ್ಥಾಪನೆಯ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯನ್ನು ಜಿಲ್ಲಾಧಿಕಾರಿಗಳು ಇಂದು ಕಾರ್ಖಾನೆಯ ಆವರಣದಲ್ಲಿ ಕರೆದಿದ್ದರು.
ಸಭೆಯ ಉದ್ದೇಶದಿಂದ ಕಾರ್ಖಾನೆಯ ಒಳಾಂಗಣದಲ್ಲಿ ಬೃಹತ್ ಪೆಂಡಾಲ್ ಹಾಕಿ ಸಾವಿರಾರು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಖಾನೆಯ ಪರವಾಗಿ ಆಗಮಿಸಿದ್ದವರು ಪೆಂಡಾಲ್ ಒಳಗಡೆಯಿದ್ದರೆ ವಿರೋಧ ವ್ಯಕ್ತಪಡಿಸುವವರನ್ನು ಪೆÇಲೀಸರು ಒಳಗೆ ಬಿಡದೆ ಕಾರ್ಖಾನೆಯ ಗೇಟುಗಳನ್ನು ಭದ್ರಪಡಿಸಿದ್ದರು. ಸಭಾಂಗಣಕ್ಕೆ ಬರುತ್ತಿದ್ದಂತೆಯೇ ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಎಲ್ಲರನ್ನೂ ಒಳಗೆ ಬಿಡುವಂತೆ ಸೂಚಿಸಿದರು.
ಪೆಂಡಾಲ್ ಒಳಗೆ ಬರುತ್ತಿದ್ದಂತೆಯೇ ಕಾರ್ಖಾನೆಯ ನೂತನ ಘಕಟಗಳ ಆರಂಭಕ್ಕೆ ಭಾರೀ ಪ್ರತಿರೋಧ ವ್ಯಕ್ತಪಡಿಸಿದ ಸ್ಥಳೀಯರು ಪೆÇಲೀಸರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರವನ್ನೆ ಕಾರ್ಖಾನೆಯ ಆಡಳಿತ ಮಂಡಲಿ ವಂಚಿಸಲು ಹೊರಟಿದೆ. ಹೇಮಾವತಿ ನದಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಈಗಾಗಲೇ ಪರಿಸರ ಇಲಾಖೆ ವರದಿ ನೀಡಿದೆ. ಕಾರ್ಖಾನೆಯವರು ನೂತನ ಘಟಕಗಳನ್ನು ಆರಂಭಿಸಿದರೆ ಹೇಮಾವತಿ ಬಯಲಿನ ಜನರ ಬದುಕು ಸಂಪೂರ್ಣ ನಾಶವಾಗಲಿದೆ. ಕಾರ್ಖಾನೆಯ ಕಬ್ಬು ಅರೆಯುವಿಕೆಯ ಕಾರ್ಯಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪರಿಸರಕ್ಕೆ ವಿರುದ್ದವಾಗಿರುವ ಉದ್ದೇಶಿತ ನೂತನ ಘಕಟಗಳ ಸ್ಥಾಪನೆಗೆ ನಮ್ಮ ವಿರೋಧವಿದೆ. ಕಾರ್ಖಾನೆ ಕೆಲವು ಹೊರಗಿನ ಜನರನ್ನು ರೈತರ ಹೆಸರಿನಲ್ಲಿ ತನ್ನ ಪರವಾಗಿ ಮಾತನಾಡಲು ಕರೆಸಿಕೊಂಡಿದೆ. ಕಾರ್ಖಾನೆಯ ಆರಂಭಕ್ಕೆ ಭೂಮಿ ಕೊಟ್ಟವರು ನಾವು. ಆದರೆ ಕಾರ್ಖಾನೆ ಸ್ಥಳೀಯರಿಗೆ ಒಂದೇ ಒಂದು ಉದ್ಯೋಗ ನೀಡಿಲ್ಲ. ಭೂಮಿ ಕಳೆದುಕೊಂಡಿದ್ದವರಿಗೆ ನೀಡಿದ್ದ ಉದ್ಯೋಗವನ್ನೂ ಕಿತ್ತುಕೊಂಡಿದೆ. ಕಾರ್ಖಾನೆ ರೈತರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ್ ನಿಯಮಾನುಸಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಾನು ಸರ್ಕಾರಕ್ಕೆ ವರದಿ ಕೊಡಬೇಕಾಗಿದೆ. ನೀವೆಲ್ಲರೂ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಬೇಡ ಎಂದರೆ ನಾನು ಅದರಂತೆಯೇ ವರದಿ ಮಾಡುತ್ತೇನೆ ಎಂದರು.
ಪರವಾಗಿ ಯಾರೂ ಮಾತನಾಡಲಿಲ್ಲ: ಸಭೆಯಲ್ಲಿ ಮಾತನಾಡಿದವರೆಲ್ಲರೂ ಕಾರ್ಖಾನೆಯ ನೂತನ ಘಕಟಗಳ ಆರಂಭಕ್ಕೆ ತಮ್ಮ ವಿರೋಧವನ್ನು ದಾಖಲಿಸಿದರು. ಜಿಲ್ಲಾಧಿಕಾರಿಗಳು ಕಾರ್ಖಾನೆಯ ನೂತನ ಘಟಕಗಳ ಆರಂಭದ ಪರವಾಗಿ ಮಾತನಡುವವರಿದ್ದರೆ ಮಾತನಾಡಿ ಎಂದು ಆಹ್ವಾನಿಸಿದರೂ ಕಾರ್ಖಾನೆಯ ಪರವಾಗಿ ಯಾರೊಬ್ಬರೂ ವೇದಿಕೆಯಲ್ಲಿ ನಿಂತು ಮಾತಾಡಲಿಲ್ಲ. ಅಂತಿಮವಾಗಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಸಾರ್ವಜನಿಕರ ಪೂರ್ಣ ವಿರೋಧ ಇರುವುದು ಕಂಡು ಬಂದಿದೆ. ಸಾರ್ವಜನಿಕರ ವಿರೋಧವನ್ನು ದಾಖಲಿಸಿಕೊಂಡಿದ್ದು ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಜಿಲ್ಲಾಧಿಕಾರಿ ಡಾ.ಕುಮಾರ್ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕರೆಯಲಾಗಿದ್ದ ಸಾರ್ವಜನಿಕ ಪರಿಸರ ಅಹವಾಲು ಸಭೆಯನ್ನು ಮುಕ್ತಾಯಗೊಳಿಸಿದರು.
ಗದ್ದಲ: ಸಭೆಯನ್ನು ಮುಕ್ತಾಯಗೊಳಿಸಿ ಜಿಲ್ಲಾಧಿಕಾರಿಗಳು ಹೊರ ಬರುತ್ತಿದ್ದಂತೆಯೇ ಕೆಲವರು ಕಾರ್ಖಾನೆಯ ಪರವಾಗಿ ಮಾತನಾಡಲು ನಾವು ಬಂದಿದ್ದೇವೆ. ನಮಗೆ ಅವಕಾಶ ಕೊಡಿ ಎಂದು ಲಿಖಿತ ಮನವಿಗಳನ್ನು ನೀಡಲು ಮುಂದಾದರು. ಸಾರ್ವಜನಿಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸದೆ ಸಭೆ ಮುಗಿಯುವವರೆಗೂ ಕಾದಿದ್ದು ಅನಂತರ ಕೆಲವರು ಕಾರ್ಖಾನೆಯ ಪರ ಬಂದಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು.
ಈ ನಡುವೆ ಕೆಲವರ ನಡುವೆ ತಳ್ಳಾಟ ನೂಕಾಟಗಳು ನಡೆಯಿತು. ಸ್ಥಳದಲ್ಲಿದ್ದ ಪೆÇಲೀಸರು ಸೂಕ್ತ ರಕ್ಷಣೆಯೊಂದಿಗೆ ಎಲ್ಲವನ್ನೂ ನಿಯಂತ್ರಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಯತೀಶ್, ಹಿರಿಯ ಪರಿಸರ ಅಧಿಕಾರಿ ವಿಜಯಲಕ್ಷ್ಮಿ ಅಹವಾಲು ಸಭೆಯಲ್ಲಿದ್ದು ಸಾರ್ವಜನಿಕರ ಅಹವಾಲು ದಾಖಲಿಸಿದರು.