ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ
ಕಲಬುರಗಿ:ಮಾ.06: ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್ ಮಾರ್ಗದಲ್ಲಿನ ಬಸ್ ನಿಲ್ದಾಣದ ಬಳಿ ವಾರಸುದಾರರು ಇಲ್ಲದ ಒಂದು ಬ್ಯಾಗ್ ಪತ್ತೆಯಾಗಿದ್ದು, ಕೆಲ ಹೊತ್ತು ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಸ್ ನಿಲ್ದಾಣದಲ್ಲಿ ಒಂದು ಬ್ಯಾಕ್ ಪ್ಯಾಕ್ ಬ್ಯಾಗ್ ಇದ್ದದ್ದು ಬೆಳಿಗ್ಗೆ ಗಮನಿಸಿದ ಸಾರ್ವಜನಿಕರು ಸಂಚಾರಿ ಪೋಲಿಸ್ ಠಾಣೆಯ ಎಎಸ್‍ಐ ಸಿಕಂದರ್ ಖಾನ್ ಅವರ ಗಮನಕ್ಕೆ ತಂದರು. ಸದರಿಯವರು ನಿಯಂತ್ರಣ ಕೊಠಡಿಗೆ ವಿಷಯವನ್ನು ತಿಳಿಸಿದರು. ತಕ್ಷಣ ತಕ್ಷಣ ಬಾಂಬ್ ನಿರೋಧಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಬ್ಯಾಗ್‍ನಲ್ಲಿ ಯಾವುದೇ ರೀತಿಯಲ್ಲಿ ಸಂಶಯಾಸ್ಪದ ವಸ್ತುಗಳು ಕಂಡುಬರಲಿಲ್ಲ. ಬ್ಯಾಗ್‍ನಲ್ಲಿ ಅಂಕಪಟ್ಟಿಗಳು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮುಂತಾದವುಗಳು ದೊರಕಿವೆ. ಅದನ್ನು ಸಂಬಂಧಪಟ್ಟ ಜೇವರ್ಗಿ ತಾಲ್ಲೂಕಿನ ಮಧ್ಯ ವಯಸ್ಸಿನ ವ್ಯಕ್ತಿಗೆ ಮುಟ್ಟಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು. ತಕ್ಷಣವೇ ಆ ಬ್ಯಾಗನ್ನು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯ ಪಿಎಸ್‍ಐ ಹಣಮಂತರಾಯ್ ಅವರ ಸುಪರ್ದಿಗೆ ಒಪ್ಪಿಸಿದರು.