ಕೋಳಕೂರಿನಲ್ಲಿ ಮಾ. 11ರಂದು ಷಣ್ಮುಖ ಶಿವಯೋಗಿಗಳ ಜಯಂತ್ಯುತ್ಸವ
ಕಲಬುರಗಿ:ಮಾ.06: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೋಳಕೂರ್ ಗ್ರಾಮದಲ್ಲಿ ಬರುವ ಮಾರ್ಚ್ 11ರಂದು ಸೋಮವಾರ ಬೆಳಿಗ್ಗೆ 11-30ಕ್ಕೆ ಶ್ರೀ ಷಣ್ಮುಖ ಶಿವಯೋಗಿಗಳ ಜಯಂತ್ಯುತ್ಸವ ಮತ್ತು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ್ ಡಾ. ಬಸವಲಿಂಗ ಪಟ್ಟದ್ದೇವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಾಂತಲಿಂಗ್ ಪಾಟೀಲ್ ಕೋಳಕೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಹಾಗೂ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರು ನೆರವೇರಿಸುವರು. ಬಸವಪಟ್ಟಣದ ಮರೆಪ್ಪ ಶರಣರು ಘನ ಉಪಸ್ಥಿತಿ ಇರುವರು ಎಂದರು.
ಅಧ್ಯಕ್ಷತೆಯನ್ನು ನೀಲಕಂಠರಾಯಗೌಡ ಮಾಲಿಪಾಟೀಲ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಕಾಂಗ್ರೆಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ್ ವಡ್ಡನಕೇರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಆಗಮಿಸುವರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಅವರು ವಿಶೇಷ ಉಪನ್ಯಾಸ ನೀಡುವರು. ವಿಶೇಷವಾಗಿ ಷಣ್ಮುಖ ಶಿವಯೋಗಿಗಳ ಕುರಿತು ಕಾದಂಬರಿ ರಚಿಸಿದ ಹೆಚ್. ತಿಪ್ಪೆರುದ್ರಸ್ವಾಮಿ ಅವರ ಪುತ್ರಿ ಡಾ. ಹೆಚ್.ಟಿ. ಶೈಲಜಾ ಮೈಸೂರು ಹಾಗೂ ಅವರ ಪತಿ ಡಾ. ಎಂ.ಜಿ. ಬಸವರಾಜ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳ ಸಾಧಕರಿಗೂ ಸಹ ಇದೇ ಸಂದರ್ಭದಲ್ಲಿ ಗೌರವ ಸಮ್ಮಾನ್ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬಸವನಬಾಗೇವಾಡಿ ಮಾದರಿಯಲ್ಲಿ ರಾಜ್ಯ ಸರ್ಕಾರವು ಶ್ರೀ ಷಣ್ಮುಖ ಶಿವಯೋಗಿಗಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಚನ್ನಮಲ್ಲಯ್ಯ ಹಿರೇಮಠ್ ಹುಲ್ಲೂರ್, ಲಲಿತಾಬಾಯಿ ಹೊನ್ನಪ್ಪ ಹೊನ್ನಕೇರಿ, ಹೊನ್ನಪ್ಪ ಬಿ. ಹೊನ್ನಕೇರಿ, ಆದಪ್ಪ ಬಿ. ಸಿಕ್ಕೇದ್, ಮಹಾಂತಗೌಡ ಪೋಲಿಸ್ ಪಾಟೀಲ್, ವಿ.ಜಿ. ಪಾಟೀಲ್ ಗೌನಳ್ಳಿ, ಸಂಗಮೇಶ್ ಸಂಕಾಲಿ, ಸೋಮಶೇಖರ್ ಪಾಟೀಲ್ ತೇಗಲತಿಪ್ಪಿ, ಬಂಗಾರಪ್ಪ ಆಡಿನ್ ಮುಂತಾದವರು ಉಪಸ್ಥಿತರಿದ್ದರು.