ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ
ಕಲಬುರಗಿ:ಮಾ.6: ನಮ್ಮತನ, ಹೃದಯ ಶ್ರೀಮಂತಿಕೆ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊಡುವ, ನಮ್ಮ ದೇಶದ ಮೂಲ ಸಂಸ್ಕøತಿ, ಪರಂಪರೆಯಾದ ಜಾನಪದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ ಎಂದು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ ‘ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್’ನಲ್ಲಿ ಕಜಾಪ ಜಿಲ್ಲಾ ಘಟಕದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ಕನ್ನಡ ಜಾನಪದ ಪರಿಷತ್’ನ 9ನೇ ಸಂಸ್ಥಾಪನಾ ದಿನಾಚರಣೆ : ಜಾನಪದ ಕಲಾವಿದರು ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿಯ ಕನ್ನಡ ವಿಷಯ ಟಾಪರ್‍ಗಳಿಗೆ ಗೌರವ ಸತ್ಕಾರ, ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನರಿಂದ, ಜನರಿಗಾಗಿ, ಸಾಮಾನ್ಯ ಜನರೇ ರಚಿಸಿದ ಸಾಹಿತ್ಯ ಜನಪದವಾಗಿದೆ. ಇದು ಶಿಷ್ಠ ಸಾಹಿತ್ಯಕ್ಕೆ ತಾಯಿಬೇರಾಗದ್ದು, ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ಜೀವನದ ಪರೀಕ್ಷೆಯಲ್ಲಿ ಯಶಸ್ಸುಗೊಳಿಸುತ್ತದೆ. ಇಂದಿನ ಒತ್ತಡದ ಬದುಕಿಗೆ ನೆಮ್ಮದಿ ದೊರೆಯುತ್ತದೆ. ಜನಪದರು ನಿಸರ್ಗ ತತ್ವ ಪ್ರತಿಪಾದಕರು. ಟಿ.ವಿ, ಮೋಬೈಲ್ ಹಾವಳಿಯಲ್ಲಿ ಜನಪದವನ್ನು ಮರೆತರೆ, ದೇಶದ ಸಂಸ್ಕøತಿಗೆ ದಕ್ಕೆ ಬರುತ್ತದೆ ಎಂದು ಎಚ್ಚರಿಸಿದರು.
ಕನ್ನಡ ಜಾನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ನಮ್ಮ ಪರಿಷತ್ ಕಳೆದ 9 ವರ್ಷಗಳಿಂದ ಜನಪದ ಸಂಸ್ಕøತಿ, ಪರಂಪರೆಯನ್ನು ಉಳಿಸಿ, ಬೆಳೆಸಲು ಪೂರಕವಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮಾಡುತ್ತಿದೆ. ಜಿಲ್ಲೆಯಲ್ಲಿರುವ ಜಾನಪದ ಕಲಾವಿದರನ್ನು ಗುರ್ತಿಸಿ, ಅವರಿಗೆ ವೇದಿಕೆಯನ್ನು ಒದಗಿಸಿಕೊಟ್ಟು, ಅವರಲ್ಲಿರುವ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರಕಿಸಿಕೊಡಲಾಗಿದೆ. ಕಲಾವಿದರಿಗೆ ಸತ್ಕರಿಸಿ, ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು, ಇವುಗಳು ಸರ್ಕಾರದ ಮಾಸಾಶನಕ್ಕೆ ಅಗತ್ಯವಾದ ದಾಖಲೆಗಳಾಗಿವೆ. ಜಾನಪದ ಕಲಾವಿದರು ಇಂದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಮಾಸಾಶನ, ಪ್ರಶಸ್ತಿ-ಪುರಸ್ಕಾರ, ಗೌರವಗಳು, ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಆದ್ಯತೆ, ವಸತಿ ಸೌಕರ್ಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಸರ್ಕಾರವು ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಹಣಮಂತರಾಯ ಗುಡ್ಡೇವಾಡಿ, ಉಪನ್ಯಾಸಕರಾದ ಸಿದ್ದರಾಮ ಕಲಬುರಗಿ, ಚೈತ್ರಾ ಕಿಣಗಿ, ಭವಾನಿ ಬಡದಾಳ, ಸತೀಶಕುಮಾರ ತುಮಕೂರಕರ್ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಜಾನಪದ ಕಲಾವಿದರಾದ ಹಣಮಂತರಾಯ ಮಂಗಾಣೆ, ರಾಜು ಹೆಬ್ಬಾಳ, ಕನ್ನಡ ವಿಷಯದ ಎಸ್ಸೆಸ್ಸೆಲ್ಸಿ ಟಾಪರ್ ಪ್ರಿಯಾಂಕಾ ಹಣಮಂತರಾಯ ಮತ್ತು ಪಿಯುಸಿ ಟಾಪರ್ ನೇಹಾ ಬಾಬುರಾವ ಅವರಿಗೆ ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ವಿವಿಧ ಜಾನಪದ ಕಲಾ ಪ್ರದರ್ಶನ ಜರುಗಿತು.