42 ಸಾವಿರ ಜಮೆ ಮಾಡಿ 8 ಲಕ್ಷಕ್ಕೂ ಅಧಿಕ ಹಣ ದೋಚಿದ ವಂಚಕರು !
ಕಲಬುರಗಿ,ಮಾ.6-ಹೋಟೆಲ್ ಪ್ಯಾಕೇಜ್ ಬುಕ್ಕಿಂಗ್ ಹೆಸರಿನಲ್ಲಿ ಪ್ರಾರಂಭದಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ 42,825 ರೂ.ಗಳನ್ನು ಲಾಭದ ಹಣ ಎಂದು ಜಮೆ ಮಾಡಿ ನಂಬಿಸಿ ನಂತರ 8,40,068 ರೂಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡು ಹಣ ಮರಳಿ ನೀಡದೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಬಿಎಂ ಪದವೀಧರರಾದ ಶಾಂತಿನಗರದ ರಮೇಶಕುಮಾರ ನಿಂಬರ್ಗಿಕರ್ ಅವರೇ ವಂಚನೆಗೆ ಒಳಗಾಗಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ 10 ವರ್ಷಗಳಿಂದ ಸೀನಿಯರ್ ಎಕ್ಸಿಕಿಟಿವ್ ಆಗಿ ಕೆಲಸ ಮಾಡುತ್ತಿರುವ ರಮೇಶಕುಮಾರ ಅವರು ಸದ್ಯ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ಎಂಬ ಹೆಸರಿನ ಸೈಟ್‍ನಲ್ಲಿ 30 ಬಾರಿ ಹೋಟೆಲ್ ಪ್ಯಾಕೇಜ್ ಬುಕ್ಕಿಂಗ್ ಅಂತ ಹೇಳಿ ಪ್ರಾರಂಭದಲ್ಲಿ ಹೋಟೆಲ್ ಪ್ಯಾಕೇಜ್ ಬುಕ್ಕಿಂಗ್ ಮಾಡಿಸಿಕೊಂಡು 42,825 ಲಾಭದ ಹಣ ಅಂತ ರಮೇಶಕುಮಾರ ಅವರ ಖಾತೆಗೆ ಜಮಾ ಮಾಡಿ ನಂತರ ಹೋಟೆಲ್ ಬುಕ್ಕಿಂಗ್ ಪ್ಯಾಕೇಜ್ ಆರ್ಡರ್‍ಗಳನ್ನು ಮುಂದುವರಿಸಲು 10 ಸಾವಿರ ರೂ.ಜಮಾ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ರಮೇಕುಮಾರ 10 ಸಾವಿರ ರೂ.ಜಮಾ ಮಾಡಿದ್ದಾರೆ. ತದನಂತರ ಹೋಟೆಲ್ ಬುಕ್ಕಿಂಗ್ ಆರ್ಡರ್‍ನಲ್ಲಿ ಮೈನಸ್ ಪಾಯಿಂಟ್ ಇದ್ದು ಹಣ ಹಾಕಿದಲ್ಲಿ ಹೋಟೆಲ್ ಬುಕ್ಕಿಂಗ್ ಆರ್ಡರ್ ಲಾಭದ ಹಣ ಮತ್ತು ಜಮಾ ಮಾಡಿದ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ನಂಬಿಸಿ ಹಂತಹಂತವಾಗಿ 8,40,068 ರೂ.ಜಮಾ ಮಾಡಿಸಿಕೊಂಡು ಲಾಭದ ಹಣ ಮತ್ತು ಹೂಡಿಕೆ ಮಾಡಿದ ಹಣ ಮರಳಿ ನೀಡದೆ ವಂಚನೆ ಮಾಡಿದ್ದಾರೆ ಎಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.