ಮಾ.12 ರಂದು ದೀಕ್ಷ ಪಂಚಮಸಾಲಿ ಬೃಹತ್ ಸಮಾವೇಶ
ಕಲಬುರಗಿ,ಮಾ.6:ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇದೇ ಮಾರ್ಚ್ 12ರಂದು ಸಂಜೆ 4ಕ್ಕೆ ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೂಡಲಸಂಗಮ ದೀಕ್ಷ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರಕಾರ ಕೊನೆ ಗಳಿಗೆಯಲ್ಲಿ 2ಡಿ ಮೀಸಲಾತಿ ನೀಡಿ ಆದೇಶ ಹೊರಡಿಸಿತ್ತಾದರೂ, ರಾಜ್ಯ ವಿಧಾನಸಭೆಯ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕಾಗಿ ಆ ಆದೇಶ ಅನುಷ್ಠಾನಗೊಳ್ಳದಂತೆ ತಡೆಹಿಡಿಯಲಾಯಿತು. ಇದೀಗ ನೂತನ ಸರಕಾರ ಅಧಿಕಾರಕ್ಕೆ ಬಂದಿದ್ದಾಗ್ಯೂ ಮೀಸಲಾತಿ ನೀಡುವ ಕುರಿತು ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಗಮನ ಸೆಳೆಯುವುದರ ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ದೀಕ್ಷ ಪಂಚಮಸಾಲಿ ಸಮುದಾಯದ ಜನರಲ್ಲಿ ಹೋರಾಟ ಮನೋಭಾವ ಜಾಗೃತಗೊಳಿಸಲು ಪ್ರತಿ ಜಿಲ್ಲೆಯಲ್ಲೂ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಕಲಬುರಗಿ ನಗರದಲ್ಲಿ ಮಾ.12ರಂದು ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಈ ಸಮಾವೇಶಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆಗಳು ನಡೆಯುತ್ತಿವೆ. ಹೀಗಾಗಿ, ಇದೊಂದು ಬೃಹತ್ ಹಕ್ಕೊತ್ತಾಯ ಸಮಾವೇಶ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದಾಗ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುತ್ತಿಗೆ ಹಾಕದಂತೆ ಮನವಿ ಮಾಡಿಕೊಂಡಿದ್ದರು. ಮೇಲಾಗಿ, ಅಧಿವೇಶನ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ ಕೂಡಲೆ ಸಭೆ ಕರೆದು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ಸಭೆ ಕೈಗೊಂಡಿಲ್ಲ. ಹೀಗಾಗಿ, ರಾಜ್ಯದ 11 ಜಿಲ್ಲೆಗಳಲ್ಲಿ ಹೋರಾಟ ಕೈಗೊಂಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂಜೆ ಕೈಗೊಳ್ಳುವ ಮೂಲಕ ಸರಕಾರಕ್ಕೆ ದೇವರು ಒಳ್ಳೆಯ ಬುದ್ಧಿ ನೀಡಲಿ ಎಂದು ರಸ್ತೆತಡೆ ಚಳವಳಿಗಳನ್ನು ಕೈಗೊಳ್ಳಲಾಗಿದೆ. ಇಷ್ಟಾದರೂ ರಾಜ್ಯ ಸರಕಾರ ಈವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೀಕ್ಷ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇದ್ದು, ಕೂಡಲೇ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ಹಾಲುಮತ ಸಮಾಜವನ್ನು ಕೇಂದ್ರ ಸರಕಾರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾದ ಮುಖ್ಯಮಂತ್ರಿಗಳು ದೀಕ್ಷ ಪಂಚಮಸಾಲಿ ಸಮಾಜಕ್ಕೂ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ದೊರೆಯುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.
ಅಖಿಲ ಭಾರತ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಶರಣು ಪಪ್ಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೇಶ ಅಣ್ಣಾರಾವ್ ಕೋಡ್ಲೆ, ಸಮಾಜದ ಮುಖಂಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಉಪಮೇಯರ್ ಶಿವಾನಂದ ಪಿಸ್ತಿ ಇದ್ದರು.
ಗೆಲ್ಲುವವರೆಗೆ ಹೋರಾಟ
ದೀಕ್ಷ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ಅವರು ರಾಜ್ಯಾದ್ಯಂತ 712 ಕಿ.ಮೀ ಪಾದಯಾತ್ರೆ ಕೈಗೊಂಡು ಬೃಹತ್ ಹೋರಾಟ ಕೈಗೊಂಡಿದ್ದರು. ಇಷ್ಟಾದರೂ ಈವರೆಗೆ ನಮ್ಮ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹಾಗಾಗಿ, ಈ ಬಾರಿ ಗೆಲುವು ಲಭಿಸುವವರೆಗೆ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಸಮಾಜದ ಮುಖಂಡ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಹೇಳಿದರು.