ಅಭಿವೃದ್ದಿ ಕೆಲಸಗಳಿಗೆ ಅನುದಾನ ನೀಡಿ ಬೀದರಗೆ ಬನ್ನಿ: ಖೂಬಾ
ಕಲಬುರಗಿ,ಮಾ.6: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ( ಮಾ.7) ಬೀದರಗೆ ಬರುತ್ತಿದ್ದು, ಬರುವುದಕ್ಕಿಂತ ಮುಂಚೆ ಬೀದರ ಲೋಕಸಭಾ ಕ್ಷೇತ್ರದ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಅನುದಾನ, ಅನುಮೋದನೆ ನೀಡಿ, ಬೀದರ ಜಿಲ್ಲೆಗೆ ಬರಲಿ ಎಂದು ಕೇಂದ್ರ ಸಚಿವರು, ಬೀದರ ಕ್ಷೇತ್ರದ ಸಂಸದರಾದ ಭಗವಂತ ಖೂಬಾರವರು ಆಗ್ರಹಿಸಿದ್ದಾರೆ.
ಕಾಂಗ್ರೇಸ್ ಸರ್ಕಾರ ಬಂದು 9 ತಿಂಗಳಾದರು, ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ದಿ ಕೆಲಸಗಳು ಪ್ರಾರಂಭವಾಗಿಲ್ಲ.ಕೇವಲ ಆಡಂಬರದ ಕಾರ್ಯಕ್ರಮಗಳು ನಡೆಯುತ್ತಿವೆ, ರೈತರಿಗೆ ಬೆಳೆ ಪರಿಹಾರ ಬಂದಿಲ್ಲ. ನೂತನ ಅನುಭವ ಮಂಟಪದ ಕೆಲಸಕ್ಕೆ ಅನುದಾನ ನೀಡಿಲ್ಲ. ಬೀದರ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವುದು ಕೇವಲ ಕೇಂದ್ರ ಸರ್ಕಾರದ ಅಭಿವೃದ್ದಿ ಕೆಲಸಗಳು, ಬೀದರ ರೈಲ್ವೆ ನಿಲ್ದಾಣದ ಅಭಿವೃದ್ದಿ, ಸಿ.ಎನ್.ಜಿ. ಕಾಮಗಾರಿ, ಅಮೃತ ಯೋಜನೆಯ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಡೆಯುತ್ತಿವೆ, ಇವರ ಸಹಕಾರದಿಂದ ನಡೆಯಬೇಕಾದ ಒಂದು ಕಾಮಗಾರಿ ನಡೆಯುತ್ತಿಲ್ಲ.ಜಿಲ್ಲೆಯ ಅಭಿವೃದ್ದಿ ಕುಂಠಿತಗೊಂಡಿದೆ.ಕೇವಲ ಚುನಾವಣೆಗೋಸ್ಕರ ಭೇಟಿ ನೀಡುವುದು ಬೇಡ ಎಂದು ಸಚಿವ ಖೂಬಾ ಮನವಿ ಮಾಡಿಕೊಂಡಿದ್ದಾರೆ.ಕೇಂದ್ರ ಸರ್ಕಾರದಿಂದ ಬೀದರಗೆ ಈಗಾಗಲೆ 10 ಸಾವಿರ ಕೋಟಿಯ ಸೋಲಾರ್ ಪಾರ್ಕ, 3 ಸಾವಿರ ಕೋಟಿಯ ಸೋಲಾರ್ ಪವರ್ ಗ್ರೀಡ್, 2354 ಕೋಟಿಯ ಬೀದರ ನಾಂದೇಡ್ ವಾಯಾ ಔರಾದ ಹೊಸ ರೈಲ್ವೆ ಲೈನ್ ಮತ್ತು 90 ಕೋಟಿಯ ಸಿಪೇಟ್ ಕಾಲೇಜು ಮಂಜುರಿಯಾಗಿದೆ ಆದರೆ ತಮ್ಮ ಸರ್ಕಾರದಿಂದ ಇದಕ್ಕೆ ಅಗತ್ಯ ಭೂಮಿ ಹಾಗೂ ರಾಜ್ಯದ ಪಾಲಿನ ಅನುದಾನ ನೀಡುತ್ತಿಲ್ಲ, ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕು.ಎಲ್ಲಾ ಅಭಿವೃದ್ದಿ ವಿಷಯಗಳ ಕುರಿತು, ಕಳೆದ ತಿಂಗಳು ಫೆಬ್ರ್ರವರಿ 21 ರಂದೆ ಇಮೇಲ್ ಮೂಲಕ ವಿನಂತಿಸಿಕೊಂಡಿದ್ದೆ, ಆದರೆ ಇದ್ಯಾವುದಕ್ಕೂ ತಮ್ಮಿಂದ ಉತ್ತರ ಬಂದಿಲ್ಲ ಎಂದಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರು ದೇಶದ್ರೋಹಿಗಳ ಪರವಾಗಿ ನಿಂತ ಸಚಿವರುಗಳನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.