2ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮ
ಬೀದರ,ಮಾ.6: ನಗರದ ಕೈಲಾಶನಗರದಲ್ಲಿರುವ ಬಸವಶಾಂತಿ ಮಂಟಪದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ವತಿಯಿಂದ 2ನೇ ಮಾಸಿಕ ಶರಣ ಚಿಂತನ ಕಾರ್ಯಕ್ರಮ ಜರುಗಿತು. ಡಾ. ಎಸ್.ಎಸ್. ಸಿದ್ಧಾರೆಡ್ಡಿ ಫೌಂಡೇಷನ್ ಗೌರವ ಅಧ್ಯಕ್ಷರಾದ ಡಾ. ಗುರಮ್ಮ ಸಿದ್ಧಾರೆಡ್ಡಿಯವರು ಬಸವಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಹನ್ನೆರಡನೆ ಶತಮಾನದ ಬಸವಾದಿ ಶರಣರ ನಡೆ-ನುಡಿ ಒಂದಾಗಿದ್ದು, ಜಾತಿಯತೆ, ಅಸಮಾನತೆ, ಲಿಂಗಭೇದ, ಮೇಲು-ಕೀಳು ಎಂಬ ಭಾವನೆ ಮಾಡಲಾರದೆ ಮನುಕುಲದ ಕಲ್ಯಾಣಕ್ಕಾಗಿ ಕಾಯಕ, ದಾಸೋಹ ಸಿದ್ಧಾಂತದೊಂದಿಗೆ ವಚನ ಸಾಹಿತ್ಯದ ಮೂಲಕ ಬಸವತತ್ವದ ಅದ್ಭುತ ತತ್ವವನ್ನು ಜಗತ್ತಿಗೆ ನೀಡಿದ್ದಾರೆ. ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ವಚನಗಳ ಅಧ್ಯಯನ ಮಾಡಿದರೆ ವ್ಯಕ್ತಿಯಲ್ಲಿ ಸಕರಾತ್ಮಕ ಚಿಂತನೆಗಳು ಹುಟ್ಟಿಕೊಂಡು ಬದುಕಿನ ಸಮಸ್ಯೆಗಳ ಪರಿಹಾರವು ವಚನ ಸಾಹಿತ್ಯದಲ್ಲಿದೆ. ಈ ನಿಟ್ಟಿನಲ್ಲಿ ಸರ್ವರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದು ಕರೆ ನೀಡಿದರು.ನಗರದ ಮಾತೇ ಮಾಣಿಕೇಶ್ವರ ಕಾಲೇಜಿನ ಪ್ರಾಚಾರ್ಯರಾದ ಲೋಕೇಶ ಉಡಬಾಳೆಯವರು ಚನ್ನಬಸವಣ್ಣನವರ ಕುರಿತು ಅನುಭಾವ ನುಡಿ ಮಂಡಿಸಿದರು. ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುನಿತಾ ದಾಡಗೆಯವರು ಅಧ್ಯಕ್ಷತೆ ವಹಿಸಿದರು. ಬಸವಶಾಂತಿ ಮಂಟಪದ ಅಧ್ಯಕ್ಷರಾದ ಬಸವಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸೋಮನಾಥ ಕಾಡೊದೆ ಭಕ್ತಿಸೇವೆ, ಶಕುಂತಲಾ, ಕಸ್ತೂರಿಬಾಯಿ ಬಿರಾದಾರ, ಶ್ರಾವ್ಯ ಕಾಡೊದೆಯವರು ವಚನಗಾಯನ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ನೂತನವಾಗಿ ಬೀದರ ತಾಲೂಕಿನ ಪರಿಷತ್ತಿನ ಅಧ್ಯಕ್ಷರಾಗಿ ನೇಮಕವಾದ ಚೇತನಾ ಪಾಟೀಲ್‍ರನ್ನು ಸನ್ಮಾನಿಸಲಾಯಿತು. ಪ್ರೊ. ಉಮಾಕಾಂತ ಮೀಸೆ ಸ್ವಾಗತಿಸಿ, ಬಸವರಾಜ ಮೂಲಗೆ ನಿರೂಪಿಸಿ ಪ್ರತಿಭಾ ಮೆಂಚ್ ವಂದಿಸಿದರು. ಪ್ರಮುಖರಾದ ಎಂ.ಜಿ. ದೇಶಪಾಂಡೆ, ಡಾ. ರಘುಶಂಕ ಭಾತಂಬ್ರಾ, ಶೈಲಜಾ ಚಳಕಾಪೂರೆ, ಕಲ್ಯಾಣರಾವ ಚಳಕಾಪೂರೆ, ಎಮ್. ಬಸವರಾಜ, ಶಿವಕುಮಾರ ಮುದ್ದಾ, ಗೋದಾವರಿ ಬಿರಾದಾರ, ಡಾ. ರೇಣುಕಾ ಸ್ವಾಮಿ, ರೇವಣಪ್ಪಾ ಮೂಲಗೆ, ಬಾಪು ಮಡಕೆ ಮತ್ತು ಶರಣ-ಶರಣೆಯರು ಭಾಗವಹಿಸಿದರು.