ಔರಾದನಲ್ಲಿ ಮನೆ ಮಾಡಿದ ಸಂಭ್ರಮ : ಅಮರೇಶ್ವರ ಪಾದಪೂಜೆ ಮೂಲಕ ಜಾತ್ರೆಗೆ ಚಾಲನೆ
ಔರಾದ :ಮಾ.6: ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ನಡೆಯುವ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ಪದ್ಧತಿಯಂತೆ ಮಂಗಳವಾರ ರಾತ್ರಿ ದೇಗುಲದಲ್ಲಿ ದೇಶಮುಖ ಪರಿವಾರದರಿಂದ ಪಾದ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದಲ್ಲಿ ಸತತ ಐದು ದಿನಗಳ ಕಾಲ ನಡೆಯುವ ಉದ್ಭವಲಿಂಗ ಶ್ರೀ ಅಮರೇಶ್ವರರ ಉತ್ಸವ ಮೂರ್ತಿಯನ್ನು ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಪಾದಪೂಜೆಯ ದಿವಸ ರಥೋತ್ಸವದ ಕಲಶಕ್ಕೆ ಪೂಜೆ ನೆರವೇರಿಸಿ, ರಥಕ್ಕೆ ಕಳಸ ಏರಿಸಲಾಯಿತು, ನಂತರ ಅಮರೇಶ್ವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಬಾಜಾ ಭಜಂತ್ರಿಯೊಂದಿಗೆ ಪಟ್ಟಣದ ವಿವಿಧ ಬಡಾವಣೆಗಳ ಮೂಲಕ ಮೆರವಣಿಗೆ ನಡೆಯಿತು.
ಜಾತ್ರಾ ಮಹೋತ್ಸವ ಪಟ್ಟಣದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ, ದೇವಸ್ಥಾನ ಸೇರಿದಂತೆ ಪಟ್ಟಣದಲ್ಲಿ ದೀಪಾಲಂಕಾರ, ದೇವರ ಉತ್ಸವ ಪ್ರಯುಕ್ತ ಪ್ರತಿ ಮನೆ ಮುಂದೆ ರಂಗೋಲಿ ಹಾಕಿ ದೇವರಿಗೆ ಸ್ವಾಗತ ಕೋರಿ ಭಕ್ತರು ಅಮರೇಶ್ವರರಿಗೆ ಪೂಜೆ ಸಲ್ಲಿಸಿ ಕಾಯಿ ಕರ್ಪೂರ ಬೆಳಗಿ ಹೊದಿಕೆಗಳನ್ನು ಅರ್ಪಣೆ ಮಾಡಿ ಭಕ್ತಿ ಭಾವ ಮೆರೆದರು.
ಈ ಸಂದರ್ಭದಲ್ಲಿ ತಾಲೂಕು ಆಡಳಿತ ಮಂಡಳಿ, ಅಮರೇಶ್ವರ ದೇಗುಲ ಕಮಿಟಿಯ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಶಕುಂತಲಾ ದೇಶಮುಖ, ಡಾ ಶಂಕರರಾವ ದೇಶಮುಖ, ಕಲ್ಯಾಣರಾವ ದೇಶಮುಖ, ಸುನೀಲಕುಮಾರ ದೇಶಮುಖ, ಗೌರವ ದೇಶಮುಖ, ಶಿವರಾಜ ಅಲ್ಮಾಜೆ, ಶರಣಪ್ಪ ಪಂಚಾಕ್ಷರಿ, ದಯಾನಂದ ಘೂಳೆ, ಬಸವರಾಜ ಚ್ಯಾರೆ, ಅಮರೇಶ ಮಸ್ಕಲೆ, ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.