ವಿಎಸ್ ಕೆ ವಿವಿಯ ಕುಲಪತಿಯಾಗಿ ಪ್ರೊ. ಕೆ.ಎಂ‌ಮೇತ್ರಿ ಪದಗ್ರಹಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.6: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾಗಿ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದ  ಪ್ರೊ. ಕೆ. ಎಂ. ಮೇತ್ರಿ ಇವರು ಇಂದು ಪದಗ್ರಹಣ ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದಷ್ಟೇ
ಹಂಗಾಮಿ ಕುಲಪತಿಗಳಾಗಿ ನೇಮಕಗೊಂಡಿದ್ದ ಪ್ರೋ. ವಿಜಯಕುಮಾರ ಬಿ. ಮಲಶೆಟ್ಟಿ ಅವರು ಅಧಿಕಾರ ಹಸ್ತಾಂತರ ಮಾಡಿದರು.
ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇವರು ಮೇತ್ರಿ ಅವರನ್ನು  ವಿ.ಎಸ್.ಕೆ. ವಿವಿಯ ಕುಲಪತಿಗಳನ್ನಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ.
ಬೀದರ್ ಮೂಲದ  ಕೆ. ಎಂ.ಮೇತ್ರಿ ಇವರು ಕಳೆದ ಎರಡೂವರೆ ದಶಕಗಳಿಂದ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾಗಿ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ, ಡೀನ್ ರಾಗಿ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ನಾಡಿನ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಅಭಿವೃದ್ಧಿ, ಸಂಘಟನೆಗಾಗಿ ಕಳೆದ ಮೂರು ದಶಕಗಳಿಂದ  ಶ್ರಮಿಸುತ್ತಿದ್ದಾರೆ.
ಬಳ್ಳಾರಿ ನಗರದ  ಹೊರವಲಯದ ಶ್ರೀಧರಗಡ್ಡೆ ಬಳಿಯ ಗುಡಾರ ನಗರ ನಿರ್ಮಾಣದಲ್ಲಿ ಅಂದಿನ ಜಿ.ಪಂ ಸಿಇಓ ಹರ್ಷಗುಪ್ತ ಮತ್ತು ಮೇತ್ರಿ ಇವರ ಮಹತ್ವದ ಪಾತ್ರವಿದೆ.
ಅಷ್ಟೇ ಅಲ್ಲದೆ ದರೋಜಿಯ ಕಂಚಿನ ಕಂಠದ ಕೋಗಿಲೆಯೆಂದೇ ಪ್ರಸಿದ್ದಿ ಪಡೆದಿದ್ದ, ಎಲೆ ಮರೆ ಕಾಯಿಯಂತಿದ್ದ ಬುರ್ರಕಥೆಯ ಈರಮ್ಮ ಅವರನ್ನು ಬೆಳಕಿಗೆ ತರುವಲ್ಲಿ ಇವರ ಶ್ರಮ ಅವಿಸ್ಮರಣೀಯವಾದುದು.
ಅನೇಕ ಬುಡಕಟ್ಟು ಸಂಶೋಧನ ಕೃತಿಗಳನ್ನು ರಚಿಸಿ, ಅನೇಕರಿಗೆ ಮಾರ್ಗದರ್ಶಕರಾಗಿ ಸಂಶೋದನಾ ಮಹಾ  ಪ್ರಬಂಧಗಳ ರಚನೆಗೆ ಕಾರಣರಾಗಿದ್ದಾರೆ.
ಅಧಿಕಾರ ಸ್ವೀಕರಿಸಿದ ಮೇತ್ರಿಯವರು ಎಲ್ಲಾ ಸಿಬ್ಬಂದಿ, ಜನಪ್ರತಿನಿಧಿಗಳು, ವಿವಿಯ ಶ್ರೇಯೋಭಿಲಾಷಿಗಳ ಸಹಕಾರದಿಂದ ವಿವಿಯ ಶೈಕ್ಷಣಿಕ ಅಬನಿವೃದ್ದಿಗೆ ಶ್ರಮಿಸಲಿದೆಂದು ಹೇಳಿದರು.
ಕುಲಸಚಿವ ಎಂ.ಎನ್.ರುದ್ರೇಶ್  ಮೊದಲಾದವರು ಇದ್ದರು.