ರಾಜಕೀಯಕ್ಕೆ ಒಳ್ಳೆಯವರು ಬರಬೇಕು
ಬೀದರ್:ಮಾ.6: ಬಿಜೆಪಿ ಜಿಲ್ಲಾ ಘಟಕದ ವಕ್ತಾರರಾಗಿ ನೇಮಕಗೊಂಡ ಹಿರಿಯ ಪತ್ರಕರ್ತ ಸದಾನಂದ ಜೋಶಿ ಅವರನ್ನು ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಸನ್ಮಾನಿಸಲಾಯಿತು.
ನಾಟ್ಯಶ್ರೀ ನೃತ್ಯಾಲಯ ಹಾಗೂ ಅಭಿಮಾನಿ ಬಳಗದ ವತಿಯಿಂದ ಜೋಶಿ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೋಶಿ ಅವರು, ಪತ್ರಕರ್ತನಾಗಿ ಮೂರು ದಶಕಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ್ದೇನೆ. ಪತ್ರಿಕಾ ರಂಗದ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆ ನೀಡಿದ, ನೊಂದವರಿಗೆ ನ್ಯಾಯ ಕಲ್ಪಿಸಿದ ಆತ್ಮತೃಪ್ತಿಯಿದೆ. ದೇಶದ ಸೇವೆಗೆ ಬದುಕು ಮುಡಿಪಾಗಿಟ್ಟು ದಿನದ 18 ತಾಸು ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ಅಳಿಲು ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಒಳ್ಳೆಯವರು,
ಅಭಿವೃದ್ಧಿಪರ ಚಿಂತಕರು ಬರಬೇಕು ಎಂಬ ಆಶಯವಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನಾವೆಲ್ಲರೂ ಬಿಜೆಪಿಗೆ ಬೆಂಬಲಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮಗೆ ಕ್ಷಮಿಸುವುದಿಲ್ಲ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಹಿರಿಯ ಮುಖಂಡರಾದ ರಾಮಕೃಷ್ಣನ್ ಸಾಳೆ, ಕೆ. ಗುರುಮೂರ್ತಿ ಮಾತನಾಡಿ, ಜೋಶಿ ಅವರು ಪತ್ರಕರ್ತರಾಗಿ ಸಮಾಜ, ಜಿಲ್ಲೆಯ ಅಭಿವೃದ್ಧಿಗಾಗಿ ಕೊಟ್ಟ ಕೊಡುಗೆ ಮಾದರಿ. ಉತ್ತಮ ವ್ಯಕ್ತಿತ್ವ, ಉತ್ತಮ ವಿಚಾರಧಾರೆಗಳು ಜೋಶಿ ಅವರನ್ನು ರಾಜಕೀಯದಲ್ಲಿ ಸಹ ಹೆಸರು ತಂದುಕೊಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಉಮಾಕಾಂತ ಮೀಸೆ, ಬಸವರಾಜ ಸ್ವಾಮಿ, ಉಮೇಶ ನಾಯಕ್, ರಮೇಶ ಬಿರಾದಾರ, ವೀರಶೆಟ್ಟಿ ಖ್ಯಾಮಾ, ರವಿ ದೋಯಿಜೋಡೆ, ನಾರಾಯಣರಾವ ಮುಖೇಡಕರ್, ಪಾಂಡುರಂಗ ಪಾಂಚಾಳ, ಪರಮೇಶ್ವರ ಭಟ್, ಕಸ್ತೂರಿ, ಕವಿತಾ ಸ್ವಾಮಿ, ಶಿವದಾಸ ಸ್ವಾಮಿ, ರುಕ್ಮೊದ್ದಿನ್ ಇಸ್ಲಾಂಪುರ, ಮಂಜುಳಾ, ಸುರೇಖಾ, ಕವಿತಾ ಮೊದಲಾದವರು ಇದ್ದರು.
ಕೆ. ಸತ್ಯಮೂರ್ತಿ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು.