ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಲವರ್ಧನೆಗೆ ಇಲಾಖೆ ಅಧಿಕಾರಿಗಳು ಆದ್ಯತೆ ನೀಡಲಿ : ಸಿಡಿಪಿಒ ಇಮಾಲಪ್ಪ ಡಿಕೆ
ಔರಾದ :ಮಾ.6: ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಅವರ ಬಲವರ್ಧನೆಗೆ ಎಲ್ಲ ಇಲಾಖೆ ಅಧಿಕಾರಿಗಳು ಆದ್ಯತೆ ನೀಡಬೇಕು. ಮಕ್ಕಳ ಹಕ್ಕುಗಳ ಗ್ರಾಮಸಭೆಯು ಮಕ್ಕಳಲ್ಲಿ ಜೀವನದ ಭರವಸೆಯನ್ನು ಮೂಡಿಸವಂತೆ ಅವರನ್ನು ಪ್ರೇರಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿಕೆ ತಿಳಿಸಿದರು.
ಸೋಮವಾರ ತಾಲೂಕಿನ ಸುಂದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಇಂದು ಮುಖ್ಯ ವಾಹಿನಿಗೆ ತರುವುದು ಅಗತ್ಯವಿದೆ. ಮಕ್ಕಳ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅನೇಕ ಕಾನೂನುಗಳನ್ನು ರೂಪಿಸಿವೆ. ಆದರೆಅನುಷ್ಠಾನಕ್ಕೆ ತರುವ ಅಧಿಕಾರಿ, ಸಿಬ್ಬಂದಿಗಳಲ್ಲಿ ಕಳಕಳಿ, ಕಾಳಜಿ ಮತ್ತು ಬದ್ಧತೆ ಇರಬೇಕು. ಕಾಟಾಚಾರಕ್ಕೆ ದಾಖಲಾತಿಗಾಗಿ ಮಕ್ಕಳ ಕೆಲಸ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ಶ್ರೀಪತಿರಾವ್, ಗ್ರಾಪಂ ಅಧ್ಯಕ್ಷ ಮಾರುತಿ ಸಿಂಗೋಡೆ, ರಾಮಗೌಡಾ, ಧನರಾಜ್, ಗಂಗಮ್ಮ ಇತರರಿದ್ದರು.