ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ವಿಶ್ವವನ್ಯ ಜೀವಿ ದಿನಾಚರಣೆ
ಬೀದರ:ಮಾ.6:ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ‘ವಿಶ್ವ ವನ್ಯಜೀವಿ ದಿನಾಚರಣೆಯನ್ನು’ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಡಾ. ಶಿವಕುಮಾರ ಉಪ್ಪೆಯವರು ಈ ಭೂಮಿ ಇರುವುದೇ ನಮ್ಮೆಲ್ಲರ ಅಗತ್ಯಗಳು ಪೂರೈಯಿಸುವುದಕ್ಕೆ ಅದನ್ನ ಕಾಪಾಡಿಕೊಂಡು ಹೋಗಿ ನಮ್ಮ ಮುಂದಿನ ಪೀಳಿಗೆಗೆ ಕೊಡುವುದು ಮುಖ್ಯ ಜವಾಬ್ದಾರಿಯ ಕೆಲಸವಾಗಿದೆ ಇದನ್ನು ನೆನಪಿಟ್ಟುಕೊಂಡು ನಾವು ಬಾಳಿ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಿಷಿಕೇಶ್ಪ ಪವಾರ ವನ್ಯಜೀವಿ ಸಂಶೋಧನಾರ್ಥಿ ಬಿ.ಎನ್.ಎಚ್.ಎಸ್. ಅವರು ಮಾತನಾಡಿ ಪ್ರಾಣಿ ಸಂಕುಲ ಮತ್ತು ಸಸ್ಯ ಸಂಕುಲದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಸ್ಯ ಹಾಗೂ ಪ್ರಾಣಿಗಳ ಪಾಮುಖ್ಯತೆಯನ್ನು ತಿಳಿಸುವುದು, ವನ್ಯಜೀವಿ ಸಂಕುಲದ ವಿವಿಧ ಕೊಡುಗೆಗಳನ್ನು ಗೌರವಿಸಲು ಈ ದಿನವನ್ನು ಮೀಸಲಿರಿಸಲಾಗಿದೆ. ನಮ್ಮ ಗ್ರಹದಲ್ಲಿ ಜೀವಿ ಸಂಕುಲದ ವಿಶೇಷತೆ, ಸೌಂದರ್ಯವನ್ನು ಅರ್ಥಮಾಡಿಸುವುದೇ ಈ ದಿನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು
ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ವಿವೇಕಾನಂದ ಬಿ. ನೈಸರ್ಗಿವಾದಿ ಆರಣ್ಯ ಇಲಾಖೆ ಬೀದರ ಅವರು ಮಾತನಾಡಿ ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯವಾಗಿದೆ. ಸಿಐಟಿಇಎಸ್ ಒಪ್ಪಂದಕ್ಕೆ 1973 ಮಾರ್ಚ್ 3 ರಂದು ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಸಿಐಟಿಎಎಸ್ ಅಂತರಾಷ್ಟ್ರೀಯ ಒಪ್ಪಂದವಾಗಿದ್ದು, ವಿಶ್ವದಾದ್ಯಂತ ಸಸ್ಯ ಹಾಗೂ ವನ್ಯ ಜೀವಿ ಸಂಕುಲಗಳ ಮೇಲೆ ಹಾನಿ ಆಗದಂತೆ ನಿಗಾವಹಿಸುತ್ತದೆ ಎಂದು ಹೇಳಿದರು.
ಅತಿಥಿಗಳು ಹಾಗೂ ಉಪಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಆಣದೂರೆ ಅವರು ಮಾತನಾಡಿ ಜಗತ್ತಿನ ಅತಿ ಸ್ವಾರ್ಥ ಜೀವಿ ಎಂದರೆ ಮನುಷ್ಯನಾಗಿದ್ದಾನೆ ಅವನು ತನ್ನ ವಿಲಾಸಿಜೀವನಕ್ಕಾಗಿ ಪ್ರಕೃತಿಯನ್ನು ಹಾಳು ಮಾಡುವುದರ ಜೊತೆಗೆ ತನಗೆ ತಾನೇ ನಷ್ಟವನ್ನುಮಾಡಿಕೊಳ್ಳುತ್ತಿದ್ದಾನೆ. ಎಂದು ಹೇಳಿದರು ಹಾಗೂ ಡಾ. ಸೂರ್ಯವಂಶಿ ಪೂಜಾಯವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಪಿ. ವಿಠ್ಠಲ ರಡ್ಡಿಯವರು ಈ ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಂಡು ಹೋಗಬೇಕಾದರೆ ಪ್ರತಿಯೊಂದು ಜೀವಿಯೂ ಅಷ್ಟೇ ಮಹತ್ವ ಪೂರ್ಣವಾಗಿದೆ. ಏಕೆಂದರೆ ಆಹಾರ ಸರಪಳಿಯಲ್ಲಿ ಯಾವ ಜೀವಿ ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂಬುದು ತಿಳಿದು ಬರುತ್ತದೆ. ಇದರಲ್ಲಿ ಒಂದೇ ಒಂದು ಜೀವಿಮಾಯವಾದರು ಅದು ಮನುಷ್ಯ ಹಾಗೂ ಪ್ರಕೃತಿ ಜೀವನದ ಮೇಲೆಯೇ ಪರಿಣಾಮ ಬೀರುತ್ತದೆ ಅದರಿಂದ ಈ ಭೂಮಿಯನ್ನು ನಾವೇ ಸಂರಕ್ಷಿಸುವ ಸ್ವಯಂ ಪ್ರೇರಿತ ಜವಾಬ್ದಾರಿಯನ್ನು ಹೊತ್ತು ಪ್ರತಿಯೊಬ್ಬರು ಯುವಕರು ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಣಿಶಾಸ್ತ್ರ ವಿಭಾಗದಿಂದ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತ ಗಣ್ಯ ಮಾನ್ಯರನ್ನು ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪೂಜಾ ಮಂಗಲಗಿ ಅವರು ಸ್ವಾಗತ ಕೋರಿದರೆ, ವಿದ್ಯಾರ್ಥಿನಿ ಕು.ಶ್ರದ್ಧಾ ಅವರು ವಂದಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಸ್ನೇಹಾ ವಿದ್ಯಾಸಾಗರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕ್ಕೆತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.