ಬಿಜೆಪಿ ವಿರುದ್ಧ ಲಾಡ್ ಕಿಡಿ
ಹುಬ್ಬಳ್ಳಿ, ಮಾ 6: ನಾವು 5 ಗ್ಯಾರಂಟಿಗಳನ್ನು, ಅಭಿವೃದ್ಧಿಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸ್ತೇವೆ. ಅದರೆ ಬಿಜೆಪಿ ಸುಳ್ಳುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹರಿಹಾಯ್ದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲಿಷ್ಠ ಪ್ರಧಾನಮಂತ್ರಿ, ಸರ್ಕಾರ ಎನ್ನುತ್ತಾರೆ. 9 ವರ್ಷದಲ್ಲಿ ಡಾಲರ್ ಮೌಲ್ಯ ಹೆಚ್ಚಾಗಲು ಕಾರಣ ಏನು? ನೋಟ್ ಬ್ಯಾನ್ ಮಾಡಿದರು, ಮತ್ತೆ ಮುದ್ರಣ ಮಾಡಲು 25 ಸಾವಿರ ಕೋಟಿ ವೆಚ್ಚವಾಯಿತು. ಮೇಕ್ ಇನ್ ಇಂಡಿಯಾ ಎಲ್ಲಿದೆ? ಶ್ರೀಮಂತರಿಗೆ ಲಾಭ ಆಗಿದೆ ಹೊರತು ಬಡವರಿಗೆ ಏನೂ ಲಾಭ ಆಗಿಲ್ಲ ಎಂದು ಕಿಡಿಕಾರಿದರು.
ದೇಶದಲ್ಲಿ 12 ಸಾವಿರಕ್ಕಿಂತ ಹೆಚ್ಚು ರೈಲುಗಳಿವೆ, 75 ಒಂದೇ ಭಾರತ್ ಮಾಡಿ ಎಷ್ಟು ಪ್ರಚಾರ ತೆಗೆದುಕೊಳ್ಳುತ್ತಾರೆ ಎಂದರು.
ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್‍ನ ಕಾಪಿ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಏಕೆ ಬಿಜೆಪಿಯವರು ಕಾಪಿ ಮಾಡಿದಿರಿ ಎಂದು ಮೋದಿಯವರನ್ನು ಕೇಳಿ. ಅವರು ಇದಕ್ಕೆ ಉತ್ತರ ಕೊಡಲ್ಲ ಎಂದವರು ನುಡಿದರು.
ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟದ ಕುರಿತು ಪ್ರತಿಕ್ರಿಯೆ ನೀಡಿ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೆ? ಎಂದವರು ಪ್ರಶ್ನೆ ಮಾಡಿದರು.
ಬಿಜೆಪಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಟೆರರಿಸ್ಟ್ ಈ ಪದ ಬಿಟ್ಟರೆ ಅಭಿವೃದ್ಧಿ ವಿಚಾರವೇ ಗೊತ್ತಿಲ್ಲ, ಇಂತಹ ವಿಚಾರಗಳ ಮೇಲೆಯೇ ಚುನಾವಣೆ ಹೋಗುತ್ತಾರೆ ಎಂದು ಅವರು ಕಿಡಿಕಾರಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಸಂಬಂಧ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕೆಂಬ ಆಗ್ರಹ ವಿಚಾರವಾಗಿ ಮಾತನಾಡಿ, ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಾ? ಎಂದು ಲಾಡ್ ಪ್ರಶ್ನೆ ಮಾಡಿದರು.
ನರೇಗಾ ಯೋಜನೆ ಕೂಲಿ ಹಣ ಬಿಡುಗಡೆಯಾಗದೇ ಇರುವುದಕ್ಕೆ ಕಿಡಿಕಾರಿದ ಸಚಿವ ಸಂತೋಷ ಲಾಡ್, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆದರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‍ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪ ಕುರಿತು ಪ್ರತಿಕ್ರಿಯೆ ನೀಡಿ, ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಅವರು ತಿಳಿಸಿದರು.