ಸತತ ಅಧ್ಯಯನದಿಂದ ಉತ್ತುಂಗ ಶಿಖರಕ್ಕೇರಲು ಸಾಧ್ಯ
ಬಾಗಲಕೋಟೆ, ಮಾ. 6 : ವಿದ್ಯಾರ್ಥಿಗಳು ಸತತ ಪ್ರಯತ್ನ, ಪರಿಶ್ರಮ ಹಾಗೂ ಶ್ರದ್ಧೆಯ ಅಧ್ಯಯನದ ಮೂಲಕ ಉತ್ತುಂಗ ಶಿಖರವೇರಲು ಸಾಧ್ಯ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಭ್ಯಸಿಸಿ ಉನ್ನತ ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.
ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾರ್ಥನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಬಾಗಲಕೋಟೆ ಇವರ ಸಹಯೋಗದೊಂದಿಗೆ ಇಲ್ಲಿನ ಪ್ರಾರ್ಥನಾ ಪ.ಪೂ. ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಡೆದ ಮೂರು ದಿನಗಳ ಉತ್ತುಂಗ-2024 ಪ್ರೇರಣಾ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಸ್ತು, ಸಮಯ ಪಾಲನೆ, ಅವಧಾನ ಕೇಂದ್ರಿಕರಣದ ಮೂಲಕ ವಿದ್ಯಾರ್ಥಿಗಳು ಛಲದೊಂದಿಗೆ ಅಭ್ಯಸಿಸಿ ಉತ್ತಮ ಅಂಕ ಗಳಿಸಿ ತಮ್ಮ ಸಾಧನೆ ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರೀಕ್ಷಾ ಸಮಯದಲ್ಲಿ ಪ್ರತಿ ಅಂಕವು ಮಹತ್ವದ್ದು ಎಂದು ಪರಿಗಣಿಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗೊಳಿಸುವ ಈ ಪ್ರೇರಣಾ ಶಿಬಿರ ಆಯೋಜಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆಯ ಮಾರ್ಗದರ್ಶನದಲ್ಲಿ ಇಂತಹ ಶಿಬಿರ ಆಯೋಜಿಸಿದ ಪ್ರಾರ್ಥನಾ ಪದವಿ ಪೂರ್ವ ಕಾಲೇಜಿನ ಕಾರ್ಯ ಶ್ಲ್ಯಾಘನೀಯ ಎಂದರು.
ನಿಸರ್ಗ ಎಜ್ಯುಕೇಶನ ಅಕಾಡೆಮಿಯ ಅಧ್ಯಕ್ಷ ಶ್ರೀನಿವಾಸಗೌಡ ಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ಜ್ಞಾನ ದೊರೆಯಲು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ನೀಡಿ ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆಯಲು ಈ ಪ್ರೇರಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂದು ಹೇಳಿದರು.
ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಾರ್ಥನಾ ಪ.ಪೂ. ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪುರುಷೋತ್ತಮ ಬಿ.ವಿ., ಉಪಪ್ರಾಚಾರ್ಯ ವೆಂಕಟೇಶ ನಡಮನಿ, ಜಿ.ಎಸ್. ಹಚ್ಚೊಳ್ಳಿ, ಸಂಸ್ಥೆಯ ಆಡಳಿತಾಧಿಕಾರಿ ಸುನೀಲ ಜೀರಗಾಳ, ಶಿಕ್ಷಣ ಸಂಯೋಜಕ ಪಿ.ಬಿ. ಪಾಟೀಲ, ಬಿ.ಎನ್. ಲಚ್ಯಾಣ, ಸಂಜಯ ನಡುವಿನಮನಿ, ಸಂಜು ಈಸರಡ್ಡಿ ಉಪಸ್ಥಿತರಿದ್ದರು.