ಲೋಕಸಭಾ ಚುನಾವಣೆಯಲ್ಲಿ ಅರ್ಹರಿಗೆ ಮತ ಹಾಕಲು ಎಸ್ ಆರ್ ಹಿರೇಮಠ್ ಕರೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೫; ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ, ಎನ್ ಡಿಎ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು  ಸಿಟಿಜನ್ ಫಾರ್ ಡೆಮೊಕ್ರಸಿ ಅಧ್ಯಕ್ಷ ಎಸ್.ಆರ್.ಹಿರೇಮಠ್ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೋಮುವಾದಿ ಮತ್ತು ಫ್ಯಾಸಿಸ್ಟ್ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ದೇಶದಲ್ಲಿ ಬಹುಸಂಖ್ಯಾತ ಸಂಸ್ಕೃತಿಯನ್ನು, ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಶತಶತಮಾನಗಳಿಂದ ನಮ್ಮ ಸಮಾಜದ ಸಾಧು, ಸಂತರು, ಸೂಫಿಗಳು, ತತ್ವ ಪದಕಾರರು, ಪೋಷಿಸಿಕೊಂಡು ಬರುತ್ತಿರುವ ಸೌಹರ್ದ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ ಎಂದು ತಿಳಿಸಿದರು.ಪ್ರಸ್ತುತ ಒಕ್ಕೂಟದ ಸರ್ಕಾರವು 2020ರಲ್ಲಿ ರೈತ-ವಿರೋಧಿ ಮೂರು ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಿತ್ತು. ದೆಹಲಿ ಗಡಿಗಳಲ್ಲಿ ರೈತರು ಸ್ವಾತಂತ್ರ್ಯ ಹೋರಾಟಕ್ಕೆ ಸಮನಾದ ರೀತಿಯಲ್ಲಿ 13 ತಿಂಗಳುಗಳ ಕಾಲ ನಡೆಸಿದ್ದ ಪ್ರಬಲ ಹೋರಾಟದ ಫಲವಾಗಿ ಸರ್ಕಾರವು ಆ ಮೂರು ಕರಾಳ ಕೃಷಿ ಕಾಯಿದೆಗಳನ್ನು ವಾಪಸ್ಸು ಪಡೆಯ ಬೇಕಾಯಿತು. ಮೋದಿ ಸರ್ಕಾರವು ಅನೇಕ ವರ್ಷಗಳ ಕಾಲ ಕಾರ್ಮಿಕ ವರ್ಗ ಹೋರಾಟಗಳನ್ನು ನಡೆಸಿ ಪಡೆದು ಕೊಂಡಿದ್ದ ಪ್ರಗತಿಪರ 40 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ ನಾಲ್ಕು ಲೇಬರ್ ಕೋಡುಗಳನ್ನು ಜಾರಿಗೊಳಿಸಲಾಗಿದ್ದು, ಅವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.