ಲಕ್ಷಾಂತರ ಭಕ್ತರ ಜಯಘೊಷದೊಂದಿಗೆ ವಿಜೃಂಭಣೆಯಿಂದ ಜರುಗಿದ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ
ಸಂಜೆವಾಣಿ ವಾರ್ತೆ
ಕೊಟ್ಟೂರು.ಮಾ.6; ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತಸ್ತೋಮದಲ್ಲಿ ಸೋಮವಾರ ಸಂಜೆ 5.56 ವೇಳೆಗೆ ವಿಜೃಂಭಣೆಯಿಂದ ಜರುಗಿತು. ಸಾಮಾನ್ಯವಾಗಿ 5.15 ಅಥವಾ 15 ನಿಮಿಷದಲ್ಲಿ ಜರುಗಬೇಕಿದ್ದ ರಥೋತ್ಸವ ರಥದ ಮಿಣಿಯ ಸಮಸ್ಯೆಯಿಂದಾಗಿ ನಲವತ್ತು ನಿಮಿಷ ತಡವಾಗಿ ರಥ ಸಾಗಿತು.ತಡವಾಗಿ ರಥ ಸಾಗಿದರೂ ಲಕ್ಷಾಂತರ ಜನರು ಒಕ್ಕೊರಲಿನಿಂದ ಕೊಟ್ಟೂರೇಶ್ವರ ಮಹಾರಾಜಕ್ಕೂ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತು. ಬಿಸಿಲಿನ ಝಳಕ್ಕೆ ಪಾದಯಾತ್ರೆ ಬಂದ ಭಕ್ತರು ತತ್ತರಿಸಿದರು. ಅಲ್ಲಲ್ಲಿ ಜನರು ಜ್ಞಾನ ತಪ್ಪಿದಿದ್ದು ಕಂಡು ಬಂದಿತು.ಬೆಳಗ್ಗೆ ಶಾಸ್ತ್ರೋಕ್ತವಾಗಿ ಏಣಿಗೆ ಪೂಜೆ ಸಲ್ಲಿಸಿ, ದಲಿತ ಸಮುದಾಯದ ನೂರಾರು ಯುವಕರು ಮೆರವಣಿಗೆ ಮೂಲಕ   ವಿಜೃಂಭಣೆಯಿಂದ ಬೃಹತ್ತಾದ ಏಣಿಯನ್ನು ಹೊತ್ತೊಯ್ದು ರಥಕ್ಕೆ ನಿಲ್ಲಿಸಿದ ನಂತರ ಮಧ್ಯಾಹ್ನ ಬಲಿದಾನವನ್ನು ಆಯಗಾರ ಬಳಗದಿಂದ  ಸಮರ್ಪಿಸಲಾಯಿತು.ತರುವಾಯ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹೀರೆಮಠದಿಂದ ಕ್ರೀಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರ ನೇತೃತ್ವದಲ್ಲಿ ಪಲ್ಲಕ್ಕಿಯಲ್ಲಿ ಹೊರಟು ಹರಳಯ್ಯನ ಮಗಳಿಂದ ದೂಪದಾರತಿ. ಆರತಿ ಬೆಳಗಿಸಿಕೊಂಡು ವಿವಿಧ ಮೇಳಗಳೊಂದಿಗೆ ಪಲ್ಲಕಿ ಉತ್ಸವ ಸಾಗಿ ಶ್ರೀ ಸ್ವಾಮಿಯು ರಥವೇರಿತು.ಪ್ರತಿ ವರ್ಷಕ್ಕಿಂತ ಈ ವರ್ಷ, ರಥದ ಮಿಣಿ ಸಮಸ್ಯೆ ಯಿಂದ 40 ನಿಮಿಷ ತಡವಾಗಿ ರಥ ಸಾಗಿದರೂ ಭಕ್ತರು ಬಾಳೆ ಹಣ್ಣು,ಉತ್ತುತ್ತಿ,ದವನ ಎಸೆದು ಸಂಭ್ರಮಿಸಿ ನಮಿಸಿದರು,ರಥೋತ್ಸವದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿ ದ್ದರು.ಪಟ್ಟಣದಿಂದ ಆರು ಕಿಮಿ ದೂರ ಇರುವ ಕೆ. ಅಯ್ಯನಹಳ್ಳಿಯಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಜೊತೆಯಲ್ಲಿ, ತಹಶಿಲ್ದಾರ ಜಿ.ಕೆ. ಅಮರೇಶ. ಧಾರ್ಮಿಕ ದತ್ತಿ ಇಲಾಖೆಯ ಇಒ ಕೃಷ್ಣಪ್ಪ ಕೊಟ್ಟೂರಿಗೆ ಆಗಮಿಸಿ ರಥವನ್ನು ಪರೀಶೀಲಿಸಿ ದೇವಾಲಯಕ್ಕೆ ಆಗಮಿಸಿ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು. ಶಾಸಕ ನೇಮಿರಾಜ್ ನಾಯ್ಕ, ಮಾಜಿ ಶಾಸಕ ಭೀಮನಾಯ್ಕ ಹಗರಿಬೊಮ್ಮನಹಳ್ಳಿಯಿಂದ ಕೊಟ್ಟೂರಿಗೆ ಪಾದಯಾತ್ರೆ ಬಂದು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು. ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ. ಶ್ರೀ ರಾಮುಲು. ಲೋಕಸಭಾ ಸದಸ್ಯ ದೇವೇಂದ್ರಪ್ಪ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು.