ಕನ್ನಡ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
ದೇವದುರ್ಗ.ಮಾ.೦೬- ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಒಂದು ಎಕರೆ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿದ ಹಿನ್ನೆಲೆ ಇಲ್ಲಿನ ಶಂಕರಬಂಡಿ ರಸ್ತೆಯಲ್ಲಿ ಭೂಮಾಪನಾ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ಸ್ಥಳಪರಿಶೀಲನೆ ನಡೆಸಿತು.
ಪಟ್ಟಣದಲ್ಲಿ ನಾಡು ನುಡಿ ಕಾರ್ಯಕ್ರಮ, ಸಭೆ ಸಮಾರಂಭ ಮಾಡಲು ಕನ್ನಡ ಭವನ ಕೊರತೆಯಿದ್ದು ಒಂದು ಎಕರೆ ಜಮೀನು ಮಂಜೂರು ಮಾಡುವಂತೆ ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನತಾದರ್ಶನದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಅರ್ಜಿ ಪರಿಶೀಲಿಸಿ ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು.
ಮುಖ್ಯಮಂತ್ರಿ ಆದೇಶ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಪತ್ರ ಬರೆದಿದ್ದರು. ಇದರ ಅನ್ವಯ ತಹಸೀಲ್ದಾರ್, ಪಟ್ಟಣ ವ್ಯಾಪ್ತಿಯ ಸರ್ವೇ ನಂಬರ್ ೧೭೦//ರಡಿ ಬರುವ ೫೮.೨೪ಎಕರೆ ಸರ್ಕಾರಿ ಜಮೀನಿನಲ್ಲಿ ಒಂದು ಎಕರೆ ಜಮೀನು ಕನ್ನಡ ಭವನಕ್ಕೆ ನೀಡಲು ಸ್ಥಳ ಪರಿಶೀಲಿಸುವಂತೆ ಭೂಮಾಪನ ಇಲಾಖೆಗೆ ಪತ್ರ ಬರೆದಿದ್ದರು.
ಭೂಮಾಪನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಸ್ಥಳ ಪರಿಶೀಲಿಸಿದರು. ನಂತರ ನಕಾಶೆ ತಯಾರಿಸಿ ಮೇಲಧಿಕಾರಿಗಳಿಗೆ ದಾಖಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಭೂಮಾಪನ ಇಲಾಖೆ ಸಹಾಯಕ ಅಧಿಕಾರಿ ನಂದು ಕುಮಾರ್, ಮಲ್ಲೇಶ್, ಕೃಷ್ಣಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ರಂಗಪ್ಪ ಕೋತಿಗುಡ್ಡ ಇತರರಿದ್ದರು.