ಅರಣ್ಯ ಮತ್ತು ಕಂದಾಯ ಭೂಮಿ ಹಕ್ಕು-ಮುಖ್ಯಮಂತ್ರಿಗಳೊಂದಿಗೆ ಸಭೆ : ಮಧು ಬಂಗಾರಪ್ಪ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮಾ.6; ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕು ಸಮಸ್ಯೆ ಪರಿಹಾರ, ಅರಣ್ಯ ಭೂಮಿ ಒತ್ತುವರಿ ಸಕ್ರಮ, ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಅರಣ್ಯ ಮತ್ತು ಕಂದಾಯ ಭೂಮಿ ಹಕ್ಕಿಗೆ ಸಂಬಂಧಿಸಿದ ವಿಷಯಗಳನ್ನು ಶೀಘ್ರವೇ  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾಕರಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ  ಅರಣ್ಯ ಮತ್ತು ಕಂದಾಯ ಭೂಮಿ ಹಕ್ಕಿಗೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನು ಡಿರಿಸರ್ವ್ ಮಾಡುವ ಬಗ್ಗೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಐಎ ಸಲ್ಲಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಫೆ.22 ರಂದು ದಾಖಲೆಗಳೊಂದಿಗೆ ಅಫಿಡಟನ್ನು ವಕೀಲರಿಗೆ ತಲುಪಿಸದ್ದು, ಈ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಂತ್ರಸ್ತರ ಪುನರ್ವಸತಿ ಬಗ್ಗೆ ಕ್ರಮ ವಹಿಸಲಾಗುವುದು ಎಂದರು. ಮಲೆನಾಡು ರೈತರ ಹೋರಾಟ ಸಮಿತಿ ಸದಸ್ಯರಾದ ಶ್ರೀಕರ್ ಮತ್ತು ಇತರರು, ಶರಾವತಿ ಸಂತ್ರಸ್ತರ ಪುನರ್ವಸತಿ ಕುರಿತು ಸರ್ಕಾರದ ಮಟ್ಟದಲ್ಲಿ ಒಂದು ಟಾಸ್ಕ್‍ಫೋರ್ಸ್ ಸಮಿತಿ ರಚಿಸಿ, ಸಮಗ್ರವಾಗಿ ಪರಿಶೀಲನೆ ನಡೆಸಿ, ಪ್ರಸ್ತುತ ಇರುವ ಮಾರ್ಗಸೂಚಿಯನ್ನು ಪರಿಷ್ಕರಿಸಬೇಕೆಂದು ಮನವಿ ಮಾಡಿದರು.ಹೊಸನಗರ ಹಾಗೂ ಇತರೆ ತಾಲ್ಲೂಕುಗಳ ಕಂದಾಯ ಗ್ರಾಮಗಳಲ್ಲಿ ಯಾವುದೇ ಅಧಿಸೂಚನೆಯಾಘದೇ ‘ಸೂಚಿತ ಅರಣ್ಯವೆಂದು’ ಕಂದಾಯ ಇಲಾಖೆಗಳಲ್ಲಿ ದಾಖಲಸಿರುವುದನ್ನು ಕೈಬಿಡಬೇಕೆಂಬ ಬೇಡಿಕೆ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಕೇಳಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸೊಪ್ಪಿನಬೆಟ್ಟ ಹಾಗೂ ಕಾನು ಜಮೀನುಗಳ ಅನಧಿಕೃತ ಸಾಗುವಳಿ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡುವ ಬಗ್ಗೆ ನಮೂನೆ 53 ರಲ್ಲಿ 146601 ಅರ್ಜಿಗಳು ಬಂದಿದ್ದು 18805 ಕ್ಕೆ ಮಂಜೂರಾತಿ ದೊರೆತಿದೆ, 127480 ತಿರಸ್ಕøತಗೊಂಡಿವೆ. ನಮೂನೆ 50 ರಲ್ಲಿ 109940 ಅರ್ಜಿಗಳು ಬಂದಿದ್ದು, 21654 ಅರ್ಜಿಗಳು ಮಂಜೂರಾಗಿವೆ, 89079 ತಿರಸ್ಕøತಗೊಂಡಿವೆ. ಇದಕ್ಕೆ ಸಂಬಂಧಿಸಿದ ಸರ್ಕಾರದ ಸುತ್ತೋಲೆ ಕುರಿತು ಪುನರ್‍ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.