ಸೇವಾ ವಂಚಿತ ಕೂಲಿ ಕಾರ್ಮಿಕರ 20 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಿಕೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಮಾ.6; ಚಿತ್ರದುರ್ಗ ನಗರದ ದಾವಣಗರೆ ರಸ್ತೆಯ ಕ್ರಷರ್ ಬಳಿ ಹೊರ ಜಿಲ್ಲೆಗಳ ವಲಸೆ ಕೂಲಿ ಕಾರ್ಮಿಕ ವರ್ಗದ ಬಿಡಾರಗಳಲ್ಲಿ ವಾಸಿಸುವ ಕುಟುಂಬಗಳ ಸ್ಥಳಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಮೇಲ್ವಿಚಾರಣಾ ತಂಡ ಭೇಟಿಟಿ ನೀಡಿ ಸೇವಾ ವಂಚಿತ ಕೂಲಿ ಕಾರ್ಮಿಕರ  ಐದು ವರ್ಷದೊಳಗಿನ 20 ಮಕ್ಕಳಿಗೆ ಸೋಮವಾರ ಪಲ್ಸ್ ಪೋಲಿಯೋ ಲಸಿಕೆ ನೀಡಲಾಯಿತು.ಲಸಿಕಾ ವಂಚಿತ ಮಕ್ಕಳನ್ನು ಒಂದು ಬಿಡಾರದಲ್ಲಿ ಕಲೆ ಹಾಕಿ ಹತ್ತಿರದ ಕ್ಯಾಸಾಪುರ ಮತ್ತು ಮಠದಕುರುಬರಹಟ್ಟಿ ಉಪಕೇಂದ್ರಗಳಿಂದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನವೀನ್, ವಿರೇಶ್, ಆರೋಗ್ಯ ಸುರಕ್ಷತಾ ಆಧಿಕಾರಿ ಶಿಲ್ಪ, ಮಂಜುಳಾ, ಸಮುದಾಯ ಆರೋಗ್ಯಾಧಿಕಾರಿ ಜಯಲತಾ ಇವರಿಗೆ ಸ್ಥಳಕ್ಕೆ ಲಸಿಕೆ ತರುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸೂಚನೆ ನೀಡಿ, ತಮ್ಮ ಸಮ್ಮುಖದಲ್ಲೇ ಲಸಿಕಾ ವಂಚಿತ ಮಕ್ಕಳಿಗೆ ಲಸಿಕೆ ಕೊಡಿಸಿ ಸಲಹೆ ನೀಡುತ್ತಾ, ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಇಂತಹಾ ಹೈ ರಿಸ್ಕ್ ಏರಿಯಾಗಳ ಬಗ್ಗೆ ಗಮನ ಹರಿಸಿ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ವಲಸೆ ಕುಟುಂಬಕ್ಕೆ ಮಾಹಿತಿ ಶಿಕ್ಷಣ ನೀಡಿ, ಲಸಿಕೆಯ ಮಹತ್ವ, ಮಕ್ಕಳ ಆರೋಗ್ಯ ರಕ್ಷಣೆ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಇದ್ದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿ ತಂಡ ಕ್ಯಾಸಾಪುರ ವಿಜಾಪುರ ಗ್ರಾಮಗಳ ಮನೆ ಮನೆ ಭೇಟಿ ಮೇಲ್ವಿಚಾರಣೆ ನಡೆಸಿದರು