ವಿದ್ಯಾರ್ಥಿಗಳಿಗೆ ಸಂವಿಧಾನ ಅರಿವು ಅತ್ಯಗತ್ಯ
ರಾಯಚೂರು,ಮಾ.೫- ಸಂವಿಧಾನದ ಮೂಲ ಆಶಯ ಮನೆ ಮನೆಗೆ ಸಂವಿಧಾನದ ಜಾಗೃತಿ ಜಾಥ ಮಾಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನ ಓದುವುದು, ಕಾನೂನು ಅರಿವು ಅತ್ಯಗತ್ಯ ಎಂದು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ರಾಯಚೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ವಿಶ್ವನಾಥ ಎಂ. ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಹೇಗಿದೆ ಅದರ ಉದ್ದೇಶ, ಮಾಹಿತಿ ಹಕ್ಕುಗಳ ಬಗ್ಗೆ ಅರಿಯಬೇಕಾಗಿದೆ ಪ್ರತಿಯೊಬ್ಬ ಭಾರತದ ಪ್ರಜೆ ಸಂವಿಧಾನದ ಪೀಠಿಕೆ ಮತ್ತು ಸಂವಿಧಾನವನ್ನು ತಿಳಿದುಕೊಳ್ಳಬೇಕು. ನಮಗೆ ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಅಮೂಲ್ಯವಾದ ನಿಮ್ಮ ಮತವನ್ನು ಚಲಾಯಿಸುವುದೆಂದರೆ, ನಿಮ್ಮನ್ನು ಆಳುವ ಪ್ರಜೆಯನ್ನು ನೀವು ಆರಿಸುವುದು ಎಂದರ್ಥ ಈ ನಿಟ್ಟಿನಲ್ಲಿ ಸಂವಿಧಾನಾತ್ಮಕವಾದ ಚಿಂತನೆಗಳನ್ನು ಆಶಯಗಳನ್ನು ಯುವ ವಿದ್ಯಾರ್ಥಿಗಳಾದ ತಾವುಗಳು ಅರಿತು ಅದರಂತೆ ನಡೆದು ಇತರರಿಗೂ ಅರಿವು ಮೂಡಿಸುವ ಜವಾಬ್ದಾರಿ ನೆಲೆಯಲ್ಲಿ ಸಂವಿಧಾನದ ಜಾಗೃತಿ ಜಾಥಾ ನಡೆಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಹೋರಾಟಗಾರ ಎಂ.ಆರ್.ಬೇರಿ, ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಮೂಲ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾಲೇಜುಗಳ ಪಠ್ಯಕ್ರಮಗಳಲ್ಲಿ ಭಾರತದ ಸಂವಿಧಾನ ಎಂಬ ಪತ್ರಿಕೆಯು ಪರಿಚಯಿಸಲಾಗಿದೆ. ಇದರ ಮಹತ್ವ ಮತ್ತು ಜಾಗೃತಿ ಹೆಚ್ಚಿನ ರೀತಿಯಲ್ಲಿ ಮೂಡಿಬರಲೆಂದು ಹಾಗೂ ಅಂಬೇಡ್ಕರ್ ಅವರ ಆಶಯ ಅರಿವಾಗಲೆಂದು ಸಂವಿಧಾನದ ಜಾಗೃತಿ ಜಾಥ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಹಕ್ಕು, ಕರ್ತವ್ಯ, ಕಾನೂನು ಅರಿವು ಅರಿತುಕೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ರಾವಿವಿಯ ಕುಲಸಚಿವರು ಮೌಲ್ಯಮಾಪನ ಪ್ರೊ.ಯರಿಸ್ವಾಮಿ.ಎಂ., ಕಲಾ ಮತ್ತು ಶಿಕ್ಷಣ ನಿಕಾಯ ಡೀನ್ ಪ್ರೊ.ಪಿ.ಭಾಸ್ಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿಜ್ಞಾನ ನಿಕಾಯ ಡೀನ್ ಪ್ರೊ.ಪಾರ್ವತಿ ಸಿ.ಎಸ್., ಹಾಗೂ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸಂವಿಧಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡರು.
ರಾವಿವಿ ಉಪಕುಲಸಚಿವ ಹಾಗೂ ಎನ್‌ಎಸ್‌ಎಸ್ ಸಂಯೋಜನಾ ಅಧಿಕಾರಿ ಡಾ.ಜಿ.ಎಸ್.ಬಿರಾದರ ಪ್ರಾಸ್ತವಿಕ ಮಾತನಾಡಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಹನುಮೇಶ ಅರೋಲಿ, ವಿಕ್ರಮ್ ಹೋಸೂರು, ರವಿದಾಸ್ ಇವರು ಸಂವಿಧಾನ ಕ್ರಾಂತಿ ಹಾಗೂ ಬುದ್ಧ ವಂದನೆ ಹಾಡಿದರು. ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಪ್ರಭು ಮತ್ತು ಮಲ್ಲಣ್ಣ ಅನಿಸಿಕೆ ವ್ಯಕ್ತಪಡಿಸಿದರು, ಅತಿಥಿ ಉಪನ್ಯಾಸಕರಾದ ಡಾ.ಶರಣಪ್ಪ ಛಲವಾದಿ ಸ್ವಾಗತಿಸಿ ನಿರೂಪಿಸಿದರೆ, ಡಾ.ಮಂಜುನಾಥ.ಕೆ ವಂದಿಸಿದರು.