ಹಠ ಬಿಟ್ಟು ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಅಬ್ಬಿನಹೊಳಲು ರೈತರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ.

ಸಂಜೆವಾಣಿ ವಾರ್ತೆ
ಚಿತ್ರದುರ್ಗ .ಮಾ.6; ಲಕ್ಷಾಂತರ ರೈತರ ಆಶಾ ಕಿರಣವಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಯಡಿ ಕೆಲವೇ ಕೆಲವು ರೈತರಿಂದಾಗಿ ಇಡೀ ಯೋಜನೆ ನೆನೆಗುದಿಗೆ ಬಿದ್ದಿದೆ. ರೈತರಿಗಾಗಿಯೇ ಇರುವ ಈ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೈತರು ಹಠ ಬಿಟ್ಟು ಕೆಲಸ ಮಾಡಲು ಅನುವು ಮಾಡಿ ಕೊಡಬೇಕು. ಪರಿಹಾರ ಕುರಿತಂತೆ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಅಬ್ಬಿನಹೊಳಲು ಗ್ರಾಮದ ಬಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಬಳಿಕ ಇಲ್ಲಿನ ರೈತರೊಂದಿಗೆ ಸಮಾಲೋಚನೆ ನಡೆಸಿದರು.ರೈತರು ಮಾತನಾಡಿ, ಪರಿಹಾರ ವಿಚಾರದಲ್ಲಿ ಅಬ್ಬಿನಹೊಳಲು, ನರಸೀಪುರ ಮತ್ತಿತರ ಗ್ರಾಮದ ರೈತರಿಗೆ ಅನ್ಯಾಯವಾಗಿದೆ, ಕೆಲ ರೈತರಿಗೆ 40 ಲಕ್ಷ ಪರಿಹಾರ ನೀಡಿದರೆ, ನಮಗೆ ಮಾತ್ರ ಕೇವಲ 4 ಲಕ್ಷ ನೀಡಿದ್ದಾರೆ, ಒದು ತೀರಾ ತಾರತಮ್ಯ ಮತ್ತು ಅನ್ಯಾಯ . ನಮಗೆ ಏಕರೂಪವಾಗಿ ಕನಿಷ್ಟ 40 ಲಕ್ಷ ಪರಿಹಾರ ನೀಡುವಂತೆ ಮನವಿ ಮಾಡಿದರು.
 ವಿ.ಜೆ.ಎನ್.ಎಲ್. ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಮಾತನಾಡಿ, ಅಬ್ಬಿನಹೊಳಲು ಬಳಿಯ 33 ರೈತರ ಪೈಕಿ 23 ರೈತರು ಪರಿಹಾರ ಮೊತ್ತ ಹೆಚ್ಚಳ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೈತರಿಗೆ ಅವಾರ್ಡ್ ಮೊತ್ತವನ್ನು ನ್ಯಾಯಾಲಯಕ್ಕೆ ಜಮಾ ಮಾಡಲಾಗಿದೆ. ಇಲ್ಲಿನ 1.7 ಞm ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟರೆ ತ್ವರಿತವಾಗಿ ಪೂರ್ಣಗೊಳಿಸಿ ಅಕ್ಟೋಬರ್ ವೇಳೆಗೆ ಪ್ರಾಯೋಗಿಕ ವಾಗಿ ನೀರು ಹರಿಸುವ ಪರೀಕ್ಷೆ ನಡೆಸಲಾಗುವುದು ಎಂದರು.