ಧಾರ್ಮಿಕ ಮೌಲ್ಯಗಳ ಪುನರುತ್ಥಾನದಿಂದ ನೆಮ್ಮದಿ :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಹುಬ್ಬಳ್ಳಿ.ಮಾ.6; ಸರ್ವ ಸಮುದಾಯದ ಎಲ್ಲ ರಂಗಗಳಲ್ಲಿ ಧಾರ್ಮಿಕ ಮತು ಸಾಮಾಜಿಕ ಮೌಲ್ಯಗಳು ಕಲುಷಿತಗೊಳ್ಳುತ್ತಿವೆ. ಬೆಳೆಯುವ ಯುವ ಸಮುದಾಯದಲ್ಲಿ ಧಾರ್ಮಿಕ ಶ್ರದ್ಧೆ ಕಡಿಮೆಯಾಗಿ ಗುರು ಹಿರಿಯರ ಬಗೆಗೆ ಅನಾದರ ಭಾವನೆಗಳು ಬೆಳೆಯುತ್ತಿರುವ ಕಾರಣ ಬದುಕಿನಲ್ಲಿ ಶಾಂತಿ ನೆಮ್ಮದಿಯಿಲ್ಲದಂತಾಗಿದೆ. ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ಮತ್ತು ಪುನರುತ್ಥಾನದಿಂದ ಜೀವನದಲ್ಲಿ ಶಾಂತಿ ಸಂತೃಪ್ತಿ ಪಡೆಯಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಬಿಡನಾಳ-ಹಳ್ಳಿಯಾಳ ಗ್ರಾಮದ ಗಡಿ ಭಾಗದಲ್ಲಿ ನಿರ್ಮಿಸಿದ ಶ್ರೀ ಅಂಚಡಿ ಬಸವಣ್ಣ ನೂತನ ದೇವಸ್ಥಾನ ಉದ್ಘಾಟನೆ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ದೇವರು ಮತ್ತು ಧರ್ಮದಲ್ಲಿ ಶ್ರದ್ಧೆ ಇದ್ದರೆ ಜೀವನದಲ್ಲಿ ತೃಪ್ತಿ ಸಮಾಧಾನ ಇರುತ್ತದೆ. ದೇವರನ್ನು ನಂಬುವ ಆಸ್ತಿಕರು ದೇವರನ್ನು ನಂಬದ ನಾಸ್ತಿಕರೂ ಈ ಜಗದಲ್ಲಿ ಇದ್ದಾರೆ. ನಾವು ನಿಂತ ನೆಲ ಕುಡಿಯುವ ನೀರು ತಿನ್ನುವ ಅನ್ನ ಉಸಿರಾಡುವ ಗಾಳಿ ಕೊಟ್ಟ ಮಹಾದಾನಿ ಭಗವಂತ. ಅವನ ಸ್ಮರಣೆ ಅರ್ಚನೆ ಆರಾಧನೆಯಿಂದ ಮನುಷ್ಯನ ಬಾಳು ಉಜ್ವಲಗೊಳ್ಳಲು ಪ್ರೇರೇಪಣೆ ನೀಡುತ್ತದೆ. ರೈತ ಸಮುದಾಯಕ್ಕೆ ಬಸವಣ್ಣ ಆರಾಧ್ಯ ದೈವ. ಭೂಮಿಯನ್ನು ಉತ್ತಿ ಬಿತ್ತಿ ಬೆಳೆದು ರೈತನ ಬಾಳಿಗೆ ಬಲವನ್ನು ತಂದು ಕೊಡುವ ಬಸವಣ್ಣನ ಶ್ರಮ ಸಾಧನೆ ಸಣ್ಣದಲ್ಲ. ರೈತರು ತಮ್ಮ ಶ್ರಮದ ಬೆವರಿನಿಂದ ಸುಂದರ ದೇವಾಲಯ ನಿರ್ಮಿಸಿದ್ದು ಸಂತೋಷ ತಂದಿದೆ. ದೇಶಕ್ಕೆ ಅನ್ನ ಕೊಡುವ ರೈತರ ಸಮಸ್ಯೆಗಳನ್ನು ಪರಿಹರಿಸಿ ಆರ್ಥಿಕವಾಗಿ ಸದೃಢಗೊಳ್ಳಲು ಕೇಂದ್ರ-ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕಿಸಿಕೊಡಬೇಕೆಂದರು. ದೇವಾಲಯ ನಿರ್ಮಾಣಕ್ಕಾಗಿ ಶ್ರೀಮತಿ ಜಯಶ್ರೀ-ಗಿರೀಶಗೌಡ ಗದಿಗೆಪ್ಪಗೌಡರ ಕುಟುಂಬ ವರ್ಗದವರು ಐದು ಗುಂಟೆ ಭೂದಾನ ಮಾಡಿರುವುದು ಅವರಲ್ಲಿರುವ ಧರ್ಮ ಶ್ರದ್ಧೆಗೆ ಕಾರಣವಾಗಿದೆ ಎಂದು ಹೇಳಿ ಭೂದಾನಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಆಶೀರ್ವದಿಸಿದರು.ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಸಮಾರಂಭದಲ್ಲಿ ಬಸನಗೌಡ ನಾಗನಗೌಡ್ರ, ಗುರುನಾಥಗೌಡ ಮಾದಾಪುರ, ತುಬಾಕದ ಸಹೋದರರು, ಉಮೇಶಗೌಡ ಪಾಟೀಲ ಉಮೇಶ ಹೊಸಮನಿ ಮೊದಲಾದವರು ಪಾಲ್ಗೊಂಡಿದ್ದರು. ಬಿಡನಾಳ ಮತ್ತು ಹಳ್ಳಿಯಾಳ ಗ್ರಾಮದ ರೈತರು ಸಹಕರಿಸಿದ ದಾನಿಗಳನ್ನು ಸತ್ಕರಿಸಲಾಯಿತು. ಗಂಗಾಧರ ಮೇಟಿ ಸ್ವಾಗತಿಸಿ ನಿರೂಪಿಸಿದರು.ಕಾರ್ಯಕ್ರಮದ ಸವಿ ನೆನಪಿಗಾಗಿ ಮತ್ತು ಪರಿಸರ ಸಂರಕ್ಷಣೆ ಸದುದ್ದೇಶದಿಂದ ಬಿಲ್ವಪತ್ರೆ ಸಸಿ ನೆಡಲಾಯಿತು.ಕಾರ್ಯಕ್ರಮದ ನಂತರ ಅನ್ನ ದಾಸೋಹ ನೆರವೇರಿತು.