ಸನ್ಮಾನ ಸಮಾರಂಭ
ನವಲಗುಂದ,ಮಾ.6: ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಶಿಕ್ಷಕ ಬಳಗವನ್ನು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಮರೆಯುವದಿಲ್ಲ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಸಭಾಭವನದಲ್ಲಿ ಅಮರಗೋಳ ಗ್ರಾಮದಲ್ಲಿ ಕಲಿತ 1994 ರಿಂದ 1998 ನೇ ಸಾಲಿನ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕ ಎಫ್ ಡಿ ಚಂದ್ರಣ್ಣವರ ಅವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಿವೃತ್ತ ಡಿಡಿಪಿಐ ಆರ್ ಬಿ ಬೆನಕೊಪ್ಪ ಮಾತನಾಡಿ ಕಲಿಸಿದ ಮಹನೀಯ ಗುರುವೃಂದವನ್ನು ಹಳೆ ವಿದ್ಯಾರ್ಥಿಗಳ ಬಳಗ ಸ್ಮರಸಿಕೊಳ್ಳುವದರ ಜೊತೆಗೆ ಸನ್ಮಾನಿಸಿ ಗೌರವಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು.
ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿದ ಎಫ್ ಡಿ ಚಂದ್ರಣ್ಣವರ ಮಾತನಾಡಿ ನಾನು ಒಂದೇ ತಾಲ್ಲೂಕಿನಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನಿಜಕ್ಕೂ ಸಂತೋಷ, ಆತ್ಮತೃಪ್ತಿ ತಂದಿದೆ. ನಮ್ಮ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮ ನನ್ನ ಜೀವನದಲ್ಲಿ ಮರೆಯಲಾಗದಂತಹ ಕಾರ್ಯಕ್ರಮ ಎಂದರು.
ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ರುದ್ರೇಶ ಬಂಕನೇರಿ, ನಾಗಪ ಮುಳಕಣ್ಣವರ ಹಾಗೂ ಪ್ರೇಮಾ ನಾಯ್ಕರ್, ಮಾತನಾಡಿ, ಶಿಕ್ಷಕರ ಪಾಠ ನಮಗೆ ಕೇವಲ ಶಾಲಾ ಪಾಠವಾಗಿರದೇ ಜೀವನ ಪಾಠವಾಗಿತ್ತು. ಅವರು ಕಲಿಸಿದ ಶಿಸ್ತು, ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನವು ನಮಗೆ ಸದಾ ದಾರಿದೀಪವಾಗಿದೆ ಎಂದು ಹೇಳುತ್ತಾ ಗುರುವಂದನೆ ಅರ್ಪಿಸಿದರು.
ಶಿಕ್ಷಕರಾದ ಎಸ್ ಎಫ್ ನೀರಲಗಿ, ಗಣೇಶ ಹೊಳೆಯನ್ನವರ, ಎನ್ ವಾಯ ಕಳಸಾಪುರ, ಎಂ ಬಿ ಕೆಂಚನಗೌಡ್ರ, ವಿ ಎಸ್ ವಜರಂಗಿ, ಎಂ ಎನ್ ವಗ್ಗರ, ಹಳೆಯ ವಿದ್ಯಾರ್ಥಿಗಳಾದ ರಾಮನಗೌಡ ಮುನೇನಕೊಪ್ಪ, ಶಂಕರ ಪಾಟೀಲ್, ಉಮೇಶ ಕದಂ, ನಾಗನಗೌಡ ಪಾಟೀಲ್, ಪರಶುರಾಮ್ ಸಾಳೊಂಕಿ, ಸುಭಾಸ್ ಕಿತ್ತಲಿ , ಸುವರ್ಣ ಪಾಟೀಲ್, ದೇವಕ್ಕ ಹಿರೇಮಠ ಇತರರು ಉಪಸ್ಥಿತರಿದ್ದರು.