ಸಾಮಾಜಿಕ ನ್ಯಾಯಾಕ್ಕಾಗಿ ಕಾಂತರಾಜು ಆಯೋಗದ ವರದಿ ಜಾರಿಗೆ ತನ್ನಿ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.06:- ಪ್ರತಿಯೊಂದು ಜನಾಂಗಕ್ಕೂ ಶಿಕ್ಷಣ, ಆರ್ಥಿಕ, ರಾಜಕೀಯ ಹಕ್ಕು ಬೇಕು. ಅದಕ್ಕಾಗಿ ಸಾಮಾಜಿಕ ನ್ಯಾಯ ಒದಗಿಸುವ ಕಾಂತರಾಜು ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಬೇಕು. ಈ ವಿಚಾರದಲ್ಲಿ ಯಾರ ಮಾತಿಗೂ ಕಿವಿ ಕೊಡಬಾರದು ಎಂದು ಪ್ರಗತಿಪರ ಚಿಂತಕ ಪೆÇ್ರ.ಮಹೇಶ್ ಚಂದ್ರ ಗುರು ಒತ್ತಾಯಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 160 ಕೋಟಿ ರೂ. ವೆಚ್ಚದಲ್ಲಿ 5 ವರ್ಷಗಳ ಕಾಲ ವೈಜ್ಞಾನಿಕವಾಗಿ ಸಿದ್ಧಪಡಿಸಿರುವ ವರದಿಯನ್ನು ಅವೈಜ್ಞಾನಿಕ ಎಂದು ಹೇಳುತ್ತಿರುವವರು ಜಾತಿವಾದಿಗಳು.
ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಇದೇ ಮನಸ್ಥಿತಿಯಿಂದ ವರದಿಗೆ ವಿರೋಧಿಸುತ್ತಿದ್ದಾರೆ. ತಲತಲಾಂತರದಿಂದ ಅಧಿಕಾರ ಅನುಭವಿಸುತ್ತಿರುವ ಪ್ರಬಲ ಜಾತಿಗಳಿಗೆ ಸಾಮಾಜಿಕ ನ್ಯಾಯ ಬೇಕಿಲ್ಲ ಎಂದು ಕಿಡಿಕಾರಿದರು.
ಪ್ರತಿಯೊಂದು ಜನಾಂಗಕ್ಕೂ ಶಿಕ್ಷಣ, ಆರ್ಥಿಕ, ರಾಜಕೀಯ ಹಕ್ಕು ಬೇಕು. ಅವರವರ ಜನಸಂಖ್ಯೆಗೆ ತಕ್ಕ ಮೀಸಲಾತಿ ನೀಡಿದರೆ ಉತ್ತಮ ಬದುಕು ನಿರ್ಮಾಣ ಸಾಧ್ಯ. ದೊಡ್ಡ ಜಾತಿಗಳ ಮುಖಂಡರು ಸಂವಿಧಾನಕ್ಕೆ ಅನುಗುಣವಾಗಿ ನಡೆಯದಿದ್ದರೆ, ಬಹುಜನರು ಸುಮ್ಮನಿರುವುದಿಲ್ಲ. ಸಂಖ್ಯೆಯ ಆಟದಲ್ಲೂ ನೀವು ನಮ್ಮನ್ನು ಮೀರಿಸಲು ಸಾಧ್ಯವಿಲ್ಲ. ವರದಿ ಜಾರಿಯ ದಿಟ್ಟ ನಿರ್ಧಾರಕ್ಕೆ ಮುಖ್ಯಮಂತ್ರಿ ಮುಂದಾಗಬೇಕು. ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮೊಂದಿಗೆ ಬಹು ಜನರಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಒಂದು ಮಾರಣಾಂತಿಕ ಗುಂಪು. ಒಬ್ಬರು ಕೋಮುವಾದಿ, ಮತ್ತೊಬ್ಬರು ಜಾತಿವಾದಿ. ಅವರ ಕಾಲದಲ್ಲಿ ವರದಿಯತ್ತ ಮುಖ ಹಾಕಲಿಲ್ಲ. ಮುಸ್ಲಿಮರನ್ನು ಬಯ್ಯದಿದ್ದರೆ ಬಿಜೆಪಿಗೆ ನಿದ್ದೆ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರವನ್ನು ತಾಲಿಬಾನಿ ಎನ್ನುವ ಸಂಸದ ಪ್ರತಾಪಸಿಂಹನೇ ನಿಜವಾದ ತಾಲಿಬಾನಿ. ತಾವು ಅಧಿಕಾರದಲ್ಲಿದ್ದಾಗ ಸುಮ್ಮನಿರುವುದು, ಕಾಂಗ್ರೆಸ್ ಬಂದಾಗ ಮುಸ್ಲಿಮರ ತುಷ್ಟೀಕರಣ ಎಂದು ಕೂಗುವುದೇ ಅವರ ಸ್ವಭಾವ ಎಂದು ಅವರು ವಾಗ್ದಾಳಿ ನಡೆಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಶೇ.20 ರಿಂದ 30 ರಷ್ಟು ಜನರು ಎಲ್ಲ ಸೌಲಭ್ಯ ಪಡೆಯುತ್ತಿದ್ದು, ಉಳಿದವರು ಅವಕಾಶ ವಂಚಿತರಾಗಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ವರದಿ ಅಗತ್ಯವಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನವೇ ಜಾರಿಯಾಗಬೇಕು. ಜೊತೆಗೆ ಸಂವಿಧಾನ ಪೀಠೀಕೆಯನ್ನು ಶೇ 70ರಷ್ಟು ಖಾಸಗಿ ಶಾಲೆಗಳಲ್ಲಿ ಓದುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಲೇಖಕ ಸಿದ್ದಸ್ವಾಮಿ, ಪತ್ರಕರ್ತ ಸೋಮಯ್ಯ ಮಲೆಯೂರು, ವಿಷಕಂಠ ಉಪಸ್ಥಿತರಿದ್ದರು.