ಕೃಷಿ ವಿಜ್ಞಾನ ಕಲಿಸುವ ಶಿಕ್ಷಕರು ರಾಷ್ಟ್ರದ ಸಂಪತ್ತು: ಮಾಲತಿಗೌಡ
ವಿಜಯಪುರ ಮಾ 06: ಈ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ದೇಶಕಾಯುವ ಸೈನಿಕ ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅವರನ್ನು ಸದಾ ಗೌರವಿಸಬೇಕು ಎಂದು ಬೆಂಗಳೂರಿನ ಚಲನಚಿತ್ರನಟಿ, ನಿರ್ದೇಶಕಿ ಮಾಲತಿಗೌಡ ಹೇಳಿದರು. ಅವರಿಂದು ನಗರದ ಹೊರವಲಯದ ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ರೋಟರಿ ಸಂಸ್ಥೆಯಿಂದ ಜರುಗಿದ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ ಮತ್ತು ಹಲವು ರಾಷ್ಟ್ರಗಳಿಗೆ ನಾವು ಆಹರಧಾನ್ಯ ರಪ್ತು ಮಾಡುತ್ತಿದ್ದೇವೆ. ಇಂತಹ ಮಹೋನ್ನತ ಕಾರ್ಯದಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಮಹತ್ತರವಾಗಿದೆ. ಕೃಷಿ ವಿಜ್ಞಾನಿಗಳನ್ನು ರೂಪಿಸುವ ಕೃಷಿ ವಿವಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅಂತಹ ಶಿಕ್ಷಕರನ್ನು ಸನ್ಮಾನಿಸುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಜಿ. ಎಸ್. ಕುಲಕರ್ಣಿ ಮಾತನಾಡಿ, ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ 238 ರಾಷ್ಟ್ರಗಳಲ್ಲಿ ಲಕ್ಷಾಂತರ ಸದಸ್ಯರನ್ನು ಹೊಂದಿ, ವಿನೂತನ ಕೆಲಸ ಕಾರ್ಯಗಳನ್ನು ಸಮಾಜದ ಏಳಿಗೆಗಾಗಿ ಮಾಡುತ್ತಿದೆ. ಪಲ್ಸ್ ಪೊಲಿಯೋ ಲಸಿಕೆಯ ಮೂಲಕ ಇಡೀ ಜಗತ್ತಿನಲ್ಲಿ ಯಾವ ಮಕ್ಕಳು ಅಂಗವಿಕಲರಾಗದಂತೆ ನೋಡಿಕೊಂಡಿದ್ದು ರೋಟರಿ ಸಂಸ್ಥೆಯಾಗಿದೆ. ಇದರ ಜೊತೆಗೆ ಆರೋಗ್ಯ ತಪಾಸಣೆ, ಶುದ್ಧಕುಡಿಯುವ ನೀರು, ಶಾಲೆಗಳಿಗೆ ಬೆಂಚು ನೀಡುವಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು. ಅದರಲ್ಲಿ ರಾಷ್ಟ್ರ ನಿರ್ಮಾಣದಲ್ಲಿ, ವೃತ್ತಿಪರ ಕೆಲಸ ಮಾಡುವ ಹಲವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಇದರಿಂದ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಾಗಿ ಶಿಕ್ಷಣ ಗುಣಮಟ್ಟ ಹೆಚ್ಚಲು ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ. ಭೀಮಪ್ಪ, ನಮ್ಮ ಮಹಾವಿದ್ಯಾಲಯದ ಶಿಕ್ಷಕರನ್ನು ಗುರುತಿಸಿ ಸನ್ಮಾನಮಾಡಿದ ರೊಟರಿ ಸಂಸ್ಥೆಗೆ ಅಭಿನಂದಿಸುತ್ತೇನೆ, ಏಕೆಂದರೆ ನಗರದ ಹೊರವಲಯದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುವ ಶಿಕ್ಷಕರು, ಅನೇಕ ಭಾವಿಪದವೀಧರರಿಗೆ ಪಾಠÀ ಮಾಡುವ ಜೊತೆಗೆ, ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ನಿರ್ವಹಣೆ ಹಾಗೂ ಸಮಗ್ರ ಪೀಡೆ ನಿರ್ವಹಣೆಯಂತಹ ಗುರುತರ ಜವಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆಂದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಕೃಷಿ ಸಂಸೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧಿಕ್ಷಕ ಡಾ. ಆರ್. ಬಿ. ಜೊಳ್ಳಿ, ಕೃಷಿ ಮಹಾವಿದ್ಯಾಲಯ ಪ್ರಾದ್ಯಾಪಕರುಗಳಾದ ಡಾ. ಎ. ಪಿ. ಬಿರಾದಾರ, ಡಾ. ಮಹಾಂತೇಶ ತೆಗ್ಗಿ, ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಶ್ವೇತಾ ಮನ್ನಿಕೇರಿ ಇವರಿಗೆ ರೋಟರಿ ಸಂಸ್ಥೆಯ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು.
ಕು. ಪಲ್ಲವಿ ಸ್ವಾಗತಿಸಿದರು. ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಸಿಂಧೂರ, ಇಮಾಮ ಹುಲ್ಲೂರ, ನೂರಜಹಾನ್ ಹುಲ್ಲೂರ, ಬೆಂಡಿಗೇರಿ, ಡಾ. ಎಸ್. ಎಸ್. ನಾಗಠಾಣ, ರುದ್ರಗೌಡ ಪಾಟೀಲ, ಶಿವಾನಂದ ಗಡಶೆಟ್ಟಿ ಹಾಗೂ ಪ್ರಾದ್ಯಾಪಕರುಗಳಾದ ಡಾ. ಎಸ್. ಬಿ. ಜಗ್ಗಿನವರ, ಡಾ. ಎಂ. ಎಂ. ಜಮಾದಾರ, ಡಾ. ಎಸ್. ಹೆಚ್. ಗುತ್ತರಗಿ, ಡಾ. ಎಸ್. ಎಂ. ವಸ್ತ್ರದ, ಡಾ. ಪ್ರಕಾಶ ಹೆಚ್. ಟಿ, ಡಾ. ಭರತಕುಮಾರ, ಡಾ. ಸಂಗೀತಾ ಜಾದವ, ಡಾ. ಸವಿತಾ, ಸರಸ್ವತಿ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.