ಕಲಬುರಗಿಗೆ ಶೀಘ್ರದಲ್ಲೇ ವಂದೇ ಭಾರತ್ ರೈಲು:ಸಂಸದ ಡಾ. ಉಮೇಶ್ ಜಾಧವ್
ಕಲಬುರಗಿ:ಮಾ.5: ಕಲಬುರಗಿಯಲ್ಲಿ ರೈಲು ನಿರ್ವಹಣಾ ವ್ಯವಸ್ಥೆಗೆ ಎರಡನೇ ಪಿಟ್ ಲೈನ್ ನಿರ್ಮಾಣಗೊಳ್ಳುತ್ತಿರುವುದರಿಂದ ಶೀಘ್ರದಲ್ಲೇ ವಂದೇ ಭಾರತ್ ರೈಲು ಆರಂಭವಾಗಲಿದೆ ಎಂದು ಸಂಸದರಾದ ಡಾಕ್ಟರ್ ಉಮೇಶ್ ಜಾಧವ್ ಹೇಳಿದರು.
ಕಲಬುರಗಿ ರೈಲು ನಿಲ್ದಾಣದಲ್ಲಿ ಎರಡನೇ ಫಿಟ್ ಲೈನ್ ಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೈಲುಗಳ ನಿರ್ವಹಣೆಗೆ ಪಿಟ್ ಲೈನ್ ಕೊರತೆಯಿದ್ದು ಇದೀಗ 33 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡನೇ ಪಿಟ್ ಲೈನ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿರುವುದರಿಂದ ಮುಂದಿನ ಎರಡು ತಿಂಗಳ ಒಳಗೆ ಕಾಮಗಾರಿ ಪ್ರಾರಂಭವಾಗಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎಂದರು.
ರೈಲುಗಳ ಸುರಕ್ಷತಾ ಪರೀಕ್ಷೆ , ನೀರಿನ ಶೇಖರಣೆ, ಬೆಳಕಿನ ವ್ಯವಸ್ಥೆ, ದುರಸ್ತಿ ಕಾರ್ಯ, ಶೌಚಾಲಯ ಶುಚೀಕರಣ ಮುಂತಾದ ಕೆಲಸಗಳಿಗೆ ಪಿಟ್ ಲೈನ್ ಅತ್ಯಂತ ಅಗತ್ಯವಾಗಿದ್ದು ಈ ಸಮಸ್ಯೆ ಶೀಘ್ರದಲ್ಲೇ ನಿವಾರಣೆಗೊಳ್ಳುವುದರಿಂದ ಮುಂದಿನ ದಿನಗಳಲ್ಲಿ ವಂದೇ ಭಾರತ್ ರೈಲು ಗಾಡಿ ಕೂಡ ಇಲ್ಲಿಂದ ಪ್ರಾರಂಭಿಸಲು ಅನುಕೂಲಕರವಾಗಲಿದೆ. ಎಂದರು.
ವಂದೇ ಭಾರತ್ ರೈಲು ಗಾಡಿಗೆ ಬೇಡಿಕೆ ಮುಂದಿಟ್ಟಾಗ ಕಲಬುರಗಿ ನಿಲ್ದಾಣದಲ್ಲಿ ನಿರ್ವಹಣಾ ವ್ಯವಸ್ಥೆಯ ಕೊರತೆ ಮತ್ತು ಪಿಟ್ ಲೈನ್ ಸೌಲಭ್ಯಗಳ ತೀವ್ರ ಕೊರತೆ ಎದುರಿಸಿ ರೈಲು ಪಡೆಯಲು ಸಾಧ್ಯವಾಗಲಿಲ್ಲ. ಸದ್ಯ ದೊಡ್ಡ ಸಮಸ್ಯೆಯೊಂದು ನಿವಾರಣೆಗೊಂಡು ಶೀಘ್ರದಲ್ಲೇ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
2014ರಿಂದ ರೈಲು ಇಲಾಖೆಯಲ್ಲಿ ಸಮಗ್ರ ಪ್ರಗತಿ ಸಾಧಿಸಲಾಗುತ್ತಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಲಬುರ್ಗಿಗೆ ಉನ್ನತ ಸೌಲಭ್ಯಗಳು ಲಭ್ಯವಾಗುತ್ತಿದೆ. ಶಹಾಬಾದ್ ನಲ್ಲಿ ಮೂರು ರೈಲುಗಳ ನಿಲುಗಡೆ ಆರಂಭಗೊಂಡಿದೆ. ಶೀಘ್ರದಲ್ಲೇ ಮಳಖೇಡ್ ನಿಲ್ದಾಣದಲ್ಲೂ ರೈಲುಗಳ ನಿಲುಗಡೆ ಪ್ರಕ್ರಿಯೆ ಆರಂಭವಾಗಲಿದೆ.
ಕಲ್ಬುರ್ಗಿಗೆ ಕಿಸಾನ್ ರೈಲು ಸಂಚಾರ ಪ್ರಸ್ತಾಪವಿದ್ದು ಇದರಿಂದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ್ದಾರೆ ಎಂದು ಹೇಳಿದರು. ಹಲವಾರು ವರ್ಷಗಳ ಹೋರಾಟದ ನಂತರ ನೀಲೂರು ಪ್ರದೇಶದ ಹತ್ತು ಸಾವಿರ ಜನರಿಗೆ ಅನುಕೂಲವಾಗುವ ಕೆಳ ಸೇತುವೆ ನಿರ್ಮಾಣಗೊಂಡು ಮೋದಿಯವರು ಉದ್ಘಾಟಿಸಿದರು ಚಿತಾಪುರದಲ್ಲಿ ಎಂಟು ತಾಂಡಾ ನಿವಾಸಿಗಳಿಗೆ ಅನುಕೂಲ ವಾಗುವ ಫೂಟ್ ಓವರ್ ಬ್ರಿಡ್ಜ್ ಮುಂತಾದ ಅಭಿವೃದ್ಧಿ ಕಾರ್ಯಗಳು ಮೋದಿ ಆಡಳಿತದಲ್ಲಿ ನೆರವೇರಿದೆ ಎಂದು ಹೇಳಿದರು.