ಜಿಲ್ಲೆಯಾದ್ಯಂತ ಸಂಚರಿಸುವ ಆಟೋ ಪ್ರಚಾರಮೂಲಕ ಅರಿವು ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ:ಮಾ.5:ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಲಬುರಗಿ ಸಂಯುಕ್ತಾಶ್ರಯದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಕುರಿತು ಪ.ಜಾ. ಮತ್ತು ಪ.ಪಂ. ವಾಸಿಸುವ ಸ್ಥಳಗಳಲ್ಲಿ ಸಾರ್ವಜನಿಕರಲ್ಲಿ ಪ್ರಚಾರ ಹಾಗೂ ಅರಿವು ಮೂಡಿಸಲು ಕಲಬುರಗಿ ಜಿಲ್ಲಾದ್ಯಂತ ಹಾಗೂ ಎಲ್ಲಾ ತಾಲೂಕುದಾದ್ಯಂತಹ ಹಮ್ಮಿಕೊಳ್ಳಲಾದ ಅಟೋ ಪ್ರಚಾರದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕಲಬುರಗಿ ನಗರದ ತಾರಫೈಲ್ ಬಡಾವಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಬಾಲ್ಯಾವಸ್ಥೆ ಹಾಗೂ ಕಿಶೊರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016 ರನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಸಂಪೂರ್ಣ ನಿಷೇಧಿಸಿದ್ದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಬಾಲ್ಯಾವಸ್ಥೆ ಹಾಗೂ ಕಿಶೊರಾವಸ್ಥೆ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ 20,000 ರೂ.ದಿಂದ 50,000 ರೂ. ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ 10,000 ರೂ. ಗಳ ದಂಡವನ್ನು ವಿಧಿಸಬೇಕಾಗಿರುತ್ತದೆ. ಗೌರವಾನ್ವಿತ ಭಾರತದ ಸವೋಚ್ಛ ನ್ಯಾಯಾಲಯವು ರೀಟ್ ಅರ್ಜಿ (ಸಿವಿಲ್) ಸಂಖ್ಯೆ 465/1986 ರಲ್ಲಿ ನೀಡಿರುವ ನಿರ್ದೇಶನದ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜನೆಗೊಂಡ ಪ್ರತಿ ಮಗುವಿಗೆ 20,000 ರೂ.ಗಳ ಪರಿಹಾರವನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳ ಬಾಲ್ಯವನ್ನು ಉಳಿಸೋಣ, ಅವರ ದುಡಿತ ತಪ್ಪಿಸಿ, ವಿದ್ಯ, ಆರೋಗ್ಯವನ್ನು, ಒದಗಿಸಿ ದೇಶದ ಉನ್ನತಿಗೆ ಶ್ರಮಿಸೋಣ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಲು ಪೋಷಕರು, ಸಾರ್ವಜನಿಕರು, ಸರ್ಕಾರ ನೇಮಿಸಿದ ವಿವಿಧ 11 ಇಲಾಖೆಯ ನಿರೀಕ್ಷಕರುಗಳು ಕೈಜೋಡಿಸಬೇಕು ಅಂದಾಗ ಮಾತ್ರ ಈ ಒಂದು ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಮತ್ತು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯನ್ನು ಮುಕ್ತ ಜಿಲ್ಲೆಯಾಗಿಸಲು ಪ್ರಯತ್ನ ಮಾಡಬೇಕೆಂದು ಅವರು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ ಅವರು ಮಾತನಾಡಿ, ಈ ಅಟೋ ಪ್ರಚಾರವು ಕಲಬುರಗಿ ಜಿಲ್ಲೆಯಾದ್ಯಂತ (ಎಲ್ಲಾ 11 ತಾಲೂಕಾದಾದ್ಯಂತಹÀ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಾಸಿಸುವ ಸ್ಥಳಗಳಲ್ಲಿ ಸಂಚರಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಶಾಲೆ ಮರಳಿ ಸೇರಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಅಟೋ ಪ್ರಚಾರಕ್ಕೆ ಚಾಲನೆಯನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪಾ ಹಳಿಮನಿ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.