ಕೊಲೆ: ಮೂವರು ಆರೋಪಿಗಳ ಸೆರೆ
ಕಲಬುರಗಿ,ಮಾ.5-ಆಳಂದ ತಾಲ್ಲೂಕಿನ ಸರಸಂಭಾ ಗ್ರಾಮದಲ್ಲಿ ಫೆ.29 ರಂದು ನಡೆದ ಮಹಾಂತಪ್ಪಾ ತಂದೆ ಸಿದ್ರಾಮಪ್ಪಾ ಆಲೂರೆ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾದನಹಿಪ್ಪರಗಾ ಪೊಲೀಸರು ಬಂಧಿಸಿದ್ದಾರೆ.
ಸರಸಂಭಾ ಗ್ರಾಮದ ಅಜೀತಕುಮಾರ ತಂದೆ ಮಲ್ಲಿನಾಥ ಕ್ಷೇತ್ರಿ (29) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆಕಾಶ್ ತಂದೆ ಲಾಲಸಿಂಗ್ ಕಾಮಠಿ (29) ಮತ್ತು ಮಯೂರ್ ತಂದೆ ಲಕ್ಷ್ಮಣ ಕ್ಷೇತ್ರಿ (25) ಎಂಬುವವರನ್ನು ವಿಶೇಷ ತಂಡ ಮಹಾರಾಷ್ಟ್ರದ ಪುನಾದಲ್ಲಿ ವಶಕ್ಕೆ ಪಡೆದಿದೆ.
ಮಹಾಂತಪ್ಪ ಆಲೂರೆ ಅವರನ್ನು ದುರುದ್ದೇಶದಿಂದ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಎನ್.ಶ್ರೀನಿಧಿ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಮಹ್ಮದ್ ಶರೀಫ್ ಅವರ ನೇತೃತ್ವದಲ್ಲಿ ಆಳಂದ ಸಿಪಿಐ ಸಿದ್ರಾಮಯ್ಯ ಬಿ.ಎಂ., ಮಾದನಹಿಪ್ಪರಗಾ ಪೊಲೀಸ್ ಠಾಣೆ ಪಿಎಸ್‍ಐ ವೀರೇಶ್, ಸಿಬ್ಬಂದಿಗಳಾದ ಭಾಗಣ್ಣ, ಬೀರಣ್ಣಾ ಅವರನ್ನೊಳಗೊಂಡ ವಿಶೇಷ ತಂಡ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ, ಹೆಚ್ಚುವರಿ ಎಸ್‍ಪಿ ಶ್ಲಾಘಿಸಿದ್ದಾರೆ.