ಪ್ರೇಮ ಪ್ರಕರಣ: ಯುವಕನ ಕೊಲೆ-ನಾಲ್ವರ ಬಂಧನ
ಕಲಬುರಗಿ,ಮಾ.5-ನಗರದ ಬ್ರಹ್ಮಪುರ ನಿವಾಸಿ ಅಭಿಷೇಕ ಅಶೋಕ ಜಾಧವ್ (20) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಸನೂರ ರಸ್ತೆಯ ಬಂಜಾರ ಕಾಲೋನಿಯ ಸರಸ್ವತಿ ಪುರಂನ ಅನೀಲ ತಂದೆ ಧನರಾಜ್ ರಾಠೋಡ್ (42), ಸಂತೋಷ ತಂದೆ ನೀಲಕಂಠ ರಾಠೋಡ್ (34), ಸಾಗರ ತಂದೆ ಹೀರು ಜಾಧವ್ (27) ಮತ್ತು ಹೇಮಂತ್ ತಂದೆ ಧನರಾಜ್ ರಾಠೋಡ್ (34) ಎಂಬುವವರನ್ನು ಬಂಧಿಸಲಾಗಿದೆ.
ಕುಸನೂರ ರಸ್ತೆಯ ಬಂಜಾರಾ ಕಾಲೋನಿಯ ಸರಸ್ವತಿಪುರಂನಲ್ಲಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಭಿಷೇಕ ಜಾಧವ್ ಪ್ರೀತಿಸುತ್ತಲಿದ್ದ. ಬಾಲಕಿಯನ್ನು ಭೇಟಿಯಾಗಲು ಮನೆಗೆ ಹೋದ ವೇಳೆ ಮನೆಯವರ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಆಗ ಅನೀಲ, ಸಂತೋಷ, ಸಾಗರ ಮತ್ತು ಹೇಮಂತ್ ಅವರು ಅಭಿಷೇಕನಿಗೆ ಕಟ್ಟಿಗೆ ಮತ್ತು ಕಬ್ಬಿಣದ ಪೈಪ್‍ನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ನಾಲ್ವರ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ ನಿನ್ನೆ ಕೊನೆಯುಸಿರೆಳೆದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದ್ದಾರೆ.