ಹತ್ಯೆಯಾದ ಬಿಜೆಪಿ ಮುಖಂಡ ಗಿರೀಶ್ ಚಕ್ರ ಮನೆಗೆ ಆರ್.ಅಶೋಕ ಭೇಟಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದ ಆರ್. ಅಶೋಕ

ಅಫಜಲಪುರ: ಮಾ.5:ತಾಲೂಕಿನ ಸಾಗನೂರ ಗ್ರಾಮದಲ್ಲಿ ಇತ್ತೀಚೆಗೆ ಕೊಲೆಯಾದ ಬಿಜೆಪಿ ಮುಖಂಡ ಗಿರೀಶ ಚಕ್ರ ಮನೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ
ಸೋಮವಾರ ಸಾಯಂಕಾಲ ಭೇಟಿ ನೀಡಿ ಕುಟುಂಬಸ್ಥರಲ್ಲಿ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಕೊಲೆ ಹಾಗೂ ಹಲ್ಲೆ ನಡೆಯುತ್ತಿವೆ. ಇದೇ ರೀತಿ ಮುಂದುವರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ ಹಾಗೂ ಡಿಸಿ ಅವರಿಗೆ ಇಂದು ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಘಟನೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಲಾಗುವುದು. ಅಲ್ಲದೇ ಗಿರೀಶ ಚಕ್ರ ಅವರ ಕುಟುಂಬಕ್ಕೆ ಭದ್ರತೆ ಒದಗಿಸಲು ತಿಳಿಸಲಾಗುವುದು. ನಿಮ್ಮ ಕುಟುಂಬಕ್ಕೆ ನಮ್ಮ ಇಡೀ ಬಿಜೆಪಿ ಪಕ್ಷ ಬೆಂಬಲವಾಗಿ ನಿಲ್ಲುತ್ತದೆ. ಹೀಗಾಗಿ ಯಾರೂ ಕೂಡ ಆತಂಕ ಪಡಬಾರದು ಎಂದು ಆತ್ಮಸ್ಥೈರ್ಯ ತುಂಬಿದರು.
ಕುಟುಂಬಸ್ಥರು ಮಾತನಾಡಿ, ನಮ್ಮ ಗಿರೀಶ್ ಬಿಜೆಪಿಯ ಒಳ್ಳೆಯ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವುದರಿಂದ ಸಂಸದ ಡಾ.ಉಮೇಶ ಜಾಧವ ಅವರು ಶಿಪಾರಸ್ಸು ಮಾಡಿ ಬಿಎಸ್‍ಎನ್‍ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ನೇಮಕ ಮಾಡಿದ್ದರಿಂದ ಕೆಲವು ಜನ ನಂಬಿಸಿ ನಿನಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿ ಕರೆದುಕೊಂಡು ಹೋಗಿ ಭೀಕರ ಕೊಲೆ ಮಾಡಿದ್ದಾರೆ. ಈತನ ಕೊಲೆಗೆ ಕಾಣದ ಕೈಗಳು 40 ಲಕ್ಷಕ್ಕೆ ಸುಪಾರಿ ನೀಡಿದ್ದಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಿವರಾಜ ಪಾಟೀಲ್ ರದ್ದೆವಾಡಗಿ, ಚಂದು ಪಾಟೀಲ್, ಅಮರನಾಥ ಪಾಟೀಲ್, ಅವ್ವಣ್ಣ ಮ್ಯಾಕೇರಿ, ರಿತೀಶ್ ಗುತ್ತೇದಾರ್, ದೇವಿಂದ್ರ ಜಮಾದಾರ, ಸಿದ್ದು ಸಾಲಿಮನಿ, ರವಿ ಪಾಟೀಲ್, ಮಲ್ಲು ಜಮಾದಾರ, ಚಂದ್ರಕಾಂತ ಕಿರಸಾವಳಗಿ, ಶಿವು ಗಾಣೂರ, ಸಂತೋಷ ಕಲ್ಲೂರ, ವಿಜು ವಡಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.