ಓಝೋನ ಸಂರಕ್ಷಣೆಯಿಂದ ಜೀವ ಸಂಕುಲದ ಉಳಿವು
ಕಲಬುರಗಿ:ಸೆ.16: ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಮೂಲಕ ಓಝೋನ ಪದರು ಸರ್ವ ಜೀವಿಗಳ ರಕ್ಷಾಕವಚವಾಗಿದೆ. ಇಂದು ಕೆಲವು ಕಾರಣಗಳಿಂದ ಇದು ಅಪಾಯವನ್ನು ಎದುರಿಸುತಿದ್ದು, ಅದರ ರಕ್ಷಣೆ ಮಾಡುವ ಮೂಲಕ ಜೀವ ಸಂಕುಲದ ಉಳಿವು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಶ್ರೀ ವಿವೇಕಾನಂದ ಕೋಚಿಂಗ್ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಓಜೋನ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಓಝೋನ್ ಪದರು ನಾಶವಾಗಿ ನೇರಳಾತೀತ ಕಿರಣಗಳು ಮಾನವನಿಗೆ ತಾಕಿದರೆ ಚರ್ಮರೋಗ, ಕಣ್ಣಿನ ದೋಷ, ಗಂಟಲಿನಲ್ಲಿ ಕೆರೆತ, ಕ್ಯಾನ್ಸರ್, ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು, ದಟ್ಟವಾದ ಹೊಗೆ ಹೊರಹಾಕುವ ವಾಹನಗಳ ಬಳಕೆಯನ್ನು ತಗ್ಗಿಸಬೇಕು. ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವುದು, ಎಲ್ಲೆಡೆ ವ್ಯಾಪಕವಾಗಿ ಗಿಡ-ಮರಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಕಾಪಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಡ್ರಾಪ್ಟ್ಸಮಾನ್ ಎಂ.ಬಿ.ನಿಂಗಪ್ಪ, ಸಮಾಜ ಸೇವಕ ಸಿದ್ದರಾಮ ತಳವಾರ, ಉಪನ್ಯಾಸಕ ಬಸವರಾಜ ಮಳ್ಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.