ಜನಪದರ ಆರಾಧ್ಯದೈವ ಜೋಕುಮಾರಸ್ವಾಮಿ ರೈತಬಂಧು
ಕಲಬುರಗಿ:ಸೆ.16: ಜೋಕುಮಾರಸ್ವಾಮಿಯು ಶಿವನ ಗಣದಲ್ಲಿದ್ದು, ಆತನ ಮೂರ್ತಿಯನ್ನು ಮಾಡಿ ಮನೆಗಳಿಗೆ ತೆರಳಿ, ಗಾಯನದ ರೂಪದಲ್ಲಿ ಮೌಲ್ಯಗಳನ್ನು ಪರಿಚಯಿಸುವದು ಸಂಪ್ರದಾಯವಾಗಿದೆ. ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗಿ ರೈತನ ಬದುಕು ಸದಾ ಹಸನಾಗಿರಬೇಕೆಂದು ಶಿವನಲ್ಲಿ ಪ್ರಾರ್ಥಿಸಿ, ವರವನ್ನು ಪಡೆದು ಇತನು ರೈತಬಂಧುವಾಗಿದ್ದಾನೆ ಎಂದು ಕಜಾಪ ಜಿಲ್ಲಾ ಅಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಗಂಗಾ ನಗರದಲ್ಲಿ ಸೋಮವಾರ ಜರುಗಿದ ‘ರೈತಬಂಧು ಜೋಕುಮಾರಸ್ವಾಮಿ ಸಂಭ್ರಮ, ಜಾನಪದ ಗೀತ ಗಾಯನ ಮತ್ತು ಕಲಾವಿದರಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ಜನಪದ ನಮ್ಮ ದಿನನಿತ್ಯದ ಆಚರಣೆಯಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ. ಬದುಕಿನ ಸುಂದರತೆಯ ಬಗೆಯನ್ನು ಚಿತ್ರಿಸಲಾಗಿದೆ. ಅನುಭಾವದ ಸತ್ವವನ್ನು ಹೊಂದಿರುವ ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ಜರುಗಬೇಕಾಗಿದೆ ಎಂದರು.
ಜಾನಪದ ಕಲಾವಿದರಾದ ಯಲ್ಲಮ್ಮ ಮರತೂರ, ಗುಂಡಮ್ಮ ಜಗದೇವಿ ಹಾವೇರಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು. ನಂತರ ಇದೇ ಕಲಾವಿದರಿಂದ ಜಾನಪದ ಗೀತಗಾಯನ ಜರುಗಿತು.
ಕಾರ್ಯಕ್ರಮದಲ್ಲಿ ಕಜಾಪ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಸಿದ್ದರಾಮ ತಳವಾರ, ವಸಮತ ಬಿ.ಎಡ್ ಕಾಲೇಜಿನ ಉಪನ್ಯಾಸಕ ಬಸವರಾಜ ಮಳ್ಳಿ, ಪ್ರಮುಖರಾದ ಸುಜಾತಾ ಬಿ.ಮಳ್ಳಿ, ವಿದ್ಯಾಶ್ರೀ, ಮನೋಜ ಹಾಗೂ ಬಡಾವಣೆಯ ಮಹಿಳೆಯರು, ನಾಗರಿಕರು ಪಾಲ್ಗೊಂಡಿದ್ದರು.